ಮನೆ ಸುದ್ದಿ ಜಾಲ ನಂಜನಗೂಡು ಜನತೆ ಹೆಸರಿನಲ್ಲಿ ಕಪ್ಪು ಚಿರತೆ ದತ್ತು ಪಡೆದ ಶಾಸಕ ಬಿ.ಹರ್ಷವರ್ಧನ್

ನಂಜನಗೂಡು ಜನತೆ ಹೆಸರಿನಲ್ಲಿ ಕಪ್ಪು ಚಿರತೆ ದತ್ತು ಪಡೆದ ಶಾಸಕ ಬಿ.ಹರ್ಷವರ್ಧನ್

0

ಮೈಸೂರು(Mysuru): ಕನ್ನಡ ಚಲನಚಿತ್ರ ರಂಗದ ಮೇರುನಟ ದಿವಂಗತ ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂದಧಗುಡಿ  ಚಲನಚಿತ್ರದ ಬಿಡುಗಡೆ ಹಾಗೂ ದಲಿತ್ ಪ್ಯಾಂಥರ್ಸ್ ಸಂಘಟನೆಯ ಸ್ಮರಣಾರ್ಥವಾಗಿ ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಬ್ಲಾಕ್ ಪ್ಯಾಂಥರ್ (ಕಪ್ಪು ಚಿರತೆ)ಅನ್ನು 2022ರ ಅಕ್ಟೋಬರ್ 28ರಿಂದ ಮುಂದಿನ ವರ್ಷ 2023ರ ಅಕ್ಟೋಬರ್ 27 ರವರೆಗೆ ಶಾಸಕ ಬಿ.ಹರ್ಷವರ್ಧನ್ ದತ್ತು ಪಡೆದಿದ್ದಾರೆ.

ಡಾ.ಪುನೀತ್ ರಾಜಕುಮಾರ್ ಅವರು ಕನ್ನಡ ನಾಡು ನುಡಿಯ ಹಿರಿಮೆಯನ್ನು ಸಾರುವ ಜೊತೆಗೆ ಅಮೂಲ್ಯ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ತೋರಿದ್ದರು. ಅವರು ಅಭಿನಯಿಸಿರುವ ಕೊನೆಯ ಚಿತ್ರ ಗಂದಧಗುಡಿ ಇಂದು ರಾಜ್ಯದಾದ್ಯಂತ ಬಿಡುಗಡೆಯಾಗಿದೆ.ಇದರ ಸವಿನೆನಪಿನಲ್ಲಿ ಹಾಗೂ 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಯುವ ಜನರು ದಲಿತ್ ಪ್ಯಾಂಥರ್ ಮೂವ್ಮೆಂಟ್ ಪ್ರಾರಂಭಿಸಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿ ಭಾರತದ ರಾಜಕೀಯದಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದ್ದರು ಹೀಗಾಗಿ ದಲಿತ್ ಪ್ಯಾಂಥರ್ ಸಂಘಟನೆಯ ಸ್ಮರಣಾರ್ಥ ಮೈಸೂರು ಮೃಗಾಲಯದಲ್ಲಿ ಬ್ಲಾಕ್ ಪ್ಯಾಂಥರ್ (ಕಪ್ಪು ಚಿರತೆ) ಪ್ರಾಣಿಯನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರ ಹೆಸರಿನಲ್ಲಿ ದತ್ತು ಸ್ವೀಕರಿಸಲಾಗಿದೆ.

ಮನುಷ್ಯರಂತೆ ಪ್ರಾಣಿ ಪಕ್ಷಿಗಳೂ ಸಹ ಜೀವಿಸುವ ಹಕ್ಕನ್ನು ಹೊಂದಿದ್ದು ಮೈಸೂರು ಮೃಗಾಲಯದಲ್ಲಿ ದೇಶ ವಿದೇಶಗಳ ಹಲವು ಪ್ರಭೇದದ ಪ್ರಾಣಿ ಪಕ್ಷಿಗಳಿವೆ ಅವುಗಳನ್ನು ಮೈಸೂರು ಮೃಗಾಲಯದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ವಿಶ್ವದ ಹಲವೆಡೆ ಮೃಗಾಲಯಗಳಿದ್ದರೂ ಮೈಸೂರು ಮೃಗಾಲಯ ವಿಭಿನ್ನವಾಗಿದ್ದು ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ ಹೀಗಾಗಿ ಬ್ಲಾಕ್ ಪ್ಯಾಂಥರ್ ಪ್ರಾಣಿಯನ್ನು ಒಂದು ವರ್ಷಗಳ ಕಾಲದ ನಿರ್ವಹಣೆಯ ವೆಚ್ಚವನ್ನು ಪಾವತಿಸಿ ದತ್ತು ಪಡೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.