ಮನೆ ಸುದ್ದಿ ಜಾಲ ಮೈಸೂರು: ರಾಜ್ಯೋತ್ಸವ ಮೆರವಣಿಗೆ ವೇಳೆ ದಿಢೀರ್ ಪ್ರತಿಭಟನೆ

ಮೈಸೂರು: ರಾಜ್ಯೋತ್ಸವ ಮೆರವಣಿಗೆ ವೇಳೆ ದಿಢೀರ್ ಪ್ರತಿಭಟನೆ

0

ಮೈಸೂರು(Mysuru): ರಾಜ್ಯೋತ್ಸವ ಮೆರವಣಿಗೆ ನಡೆಯುತ್ತಿದ್ದ ವೇಳೆ ಏಕಲವ್ಯ ನಗರ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಂಗಳವಾರ ಚಾಮರಾಜ ವೃತ್ತಕ್ಕೆ ಧಾವಿಸಿದ ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರ ದಿಢೀರ್ ಪ್ರತಿಭಟನೆಗೆ ಅಧಿಕಾರಿಗಳು ಹಾಗೂ ಪೊಲೀಸರು ಕಂಗಾಲಾದರು‌.

ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಐವತ್ತು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಸಮೀಪ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಉಸ್ತುವಾರಿ ಸಚಿವ ಸೌಜನ್ಯಕ್ಕೂ ನಮ್ಮ ಕಷ್ಟ ಕೇಳಲಿಲ್ಲ. ಮನವಿ ಕೊಡಲು ಹೋದರೂ ತಪ್ಪಿಸಿಕೊಂಡು ಓಡಿಹೋಗುತ್ತಾರೆ ಎಂದು ಆರೋಪಿಸಿದರು.

ಏಕಲವ್ಯ ನಗರದ ಅಲೆಮಾರಿ ಸಮುದಾಯದ ನಾಗರಿಕರಿಗೆ ಮನೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪಂಜಿನ ಮೆರವಣಿಗೆ ನಡೆಸಿದವು. ದಸರಾ ನಡೆಯುವ ವೇಳೆ ಸಂಭ್ರಮಕ್ಕೆ ತಡೆಯೊಡ್ಡಲಿಲ್ಲ. ದಸರಾ ಮುಗಿದ ಮೇಲಾದರೂ ನಮ್ಮ ದನಿ ಆಲಿಸಲಿಲ್ಲ ಎಂದು ದೂರಿದರು.

12 ವರ್ಷಗಳ ಹಿಂದೆ ಕೊಳಗೇರಿ ನಿರ್ಮೂಲನ ಮಂಡಳಿಯು ‘ಜೆ–ನರ್ಮ್‌’ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ಶ್ಯಾದನಹಳ್ಳಿಯ ಗೋಮಾ ಳಕ್ಕೆ ಸ್ಥಳಾಂತರಿಸಿತು. ಅದನ್ನು ಏಕಲವ್ಯ ನಗರವೆಂದು ಜಿಲ್ಲಾಡಳಿತ ಘೋಷಿಸಿದೆ. ಆದರೆ, ಮನೆ ಹಕ್ಕು ಪತ್ರವನ್ನು ನೀಡದೇ ಅಲೆಸುತ್ತಿದೆ ಎಂದು ನಿವಾಸಿ ಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಮೂರು ವಾಹನಗಳಲ್ಲಿ ಐವತ್ತಕ್ಕೂ ಹೆಚ್ಚು ಮಂದಿಯನ್ನು ನಗರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದರು.