ಒಬ್ಬ ವ್ಯಕ್ತಿ ಲಂಚ ನೀಡುವ ಉದ್ದೇಶದಿಂದ ಸಾರ್ವಜನಿಕ ಸೇವಕನಿಗೆ ಹಣ ಹಸ್ತಾಂತರಿಸಿದರೆ, ಆ ವ್ಯಕ್ತಿಯನ್ನು ‘ಲಾಭಗಳಿಸುವ ಉದ್ದೇಶದಿಂದ ಅಪರಾಧದಲ್ಲಿʼ ಪಾಲುದಾರನಾದ ವ್ಯಕ್ತಿ ಎಂದು ಪರಿಗಣಿಸಿ ಆತನ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
[ಜಾರಿ ನಿರ್ದೇಶನಾಲಯ ಮತ್ತು ಪದ್ಮನಾಭನ್ ಕಿಶೋರ್ ನಡುವಣ ಪ್ರಕರಣ].
ಲಂಚದ ಸಲುವಾಗಿ ಹಣ ಹಸ್ತಾಂತರಿಸುವ ವ್ಯಕ್ತಿಯ ಉದ್ದೇಶ ಪ್ರಸ್ತುತವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
“…ಲಂಚ ನೀಡುವ ಉದ್ದೇಶದಿಂದ ಹಣ ಹಸ್ತಾಂತರಿಸುವ ವ್ಯಕ್ತಿ ಅಪರಾಧಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾನೆ ಇಲ್ಲವೇ ಸಹಾಯ ಮಾಡುತ್ತಿರುತ್ತಾನೆ” ಎಂದು ಪೀಠ ಅಕ್ಟೋಬರ್ 31ರಂದು ತನ್ನ ಆದೇಶ ನೀಡಿತು.
ಸಂಬಂಧಪಟ್ಟ ವ್ಯಕ್ತಿಯ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಹಣ ಅಪರಾಧದ ಸ್ವರೂಪ ಪಡೆದುಕೊಳ್ಳುವುದಿಲ್ಲ ಎಂದಿರುವ ನ್ಯಾಯಾಲಯ “ಪಿಎಂಎಲ್ ಕಾಯಿದೆಯ ಸೆಕ್ಷನ್ 3ರ ವಿವರಗಳು ಅಂತಹ ವ್ಯಕ್ತಿ ನಿರ್ವಹಿಸಿದ ಪಾತ್ರವನ್ನು ಒಳಗೊಳ್ಳುವಷ್ಟು ವಿಶಾಲವಾಗಿವೆ” ಎಂಬುದಾಗಿ ತಿಳಿಸಿದೆ.
ಹೀಗಾಗಿ ಪಿಎಂಎಲ್ ಕಾಯಿದೆಯಡಿ ಪದ್ಮನಾಭನ್ ಕಿಶೋರ್ ಎಂಬುವವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣದ ವಿಚಾರಣೆಯನ್ನು ಕೈಬಿಟ್ಟ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ತನ್ನ ಆದಾಯ ಮೌಲ್ಯಮಾಪನ ಮಾಡಲು ಚೆನ್ನೈನ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರಿಗೆ ₹ 50 ಲಕ್ಷ ಲಂಚ ನೀಡಿದ್ದಕ್ಕಾಗಿ ಆಗಸ್ಟ್ 2011ರಲ್ಲಿ ಸಿಬಿಐ ಭ್ರಷ್ಟಾಚಾರ ತಡೆಗೆ ಸಂಬಂಧಿಸಿದ ನಿಯಮಾವಳಿಗಳಡಿ ಪದ್ಮನಾಭನ್ ಕಿಶೋರ್ ಅವರನ್ನು ಮತ್ತು ಇತರ ಅಧಿಕಾರಿಗಳನ್ನು ಬಂಧಿಸಿತ್ತು.
ನಂತರ ಸಿಬಿಐ ಕಿಶೋರ್ ಮತ್ತಿತರ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿ ನಿಗದಿತ ಅಪರಾಧ ನಡೆದಿರುವುದನ್ನು ಬಹಿರಂಗಪಡಿಸಿತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಕೂಡ 2016ರಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತು.
ಆದರೆ ತನ್ನ ಕೈಯಲ್ಲಿರುವ ಮೊತ್ತವನ್ನು ಲಂಚ ಎಂದು ಹೇಳಲು ಸಾಧ್ಯವಿಲ್ಲ. ಅದನ್ನು ಸಾರ್ವಜನಿಕ ಸೇವಕ ಸ್ವೀಕರಿಸಿದ ಬಳಿಕವಷ್ಟೇ ಅದಕ್ಕೆ ಕಳಂಕಿತ ಸ್ವರೂಪ ಬರುತ್ತದೆ. ಆದ್ದರಿಂದ ತಾನು ಅಪರಾಧ ಎಸಗಿದ್ದೇನೆ ಎಂದು ಹೇಳಲಾಗದು, ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಲಾಗದು ಎಂಬುದು ಕಿಶೋರ್ ಅವರ ವಾದವಾಗಿತ್ತು.
ಆದರೆ ಪಿಎಂಎಲ್ಎ ಸೆಕ್ಷನ್ 3ರ ಪ್ರಕಾರ ಲಂಚ ಸ್ವೀಕರಿಸಿದವರಷ್ಟೇ ಅಲ್ಲ ಲಂಚ ನೀಡಿದ ಕಿಶೋರ್ ಕೂಡ ಅಪರಾಧಿ ಎಂದ ನ್ಯಾಯಾಲಯ, ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ರದ್ದುಗೊಳಿಸಿ ಪ್ರಕರಣದಲ್ಲಿ ಕಿಶೋರ್ ಅವರನ್ನು ಮತ್ತೆ ಆರೋಪಿಯನ್ನಾಗಿ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತು.