ಹೈದರಾಬಾದ್(Hyderabad): ಮದ್ಯವ್ಯಸನಿಯಾಗಿದ್ದ ನಿರುದ್ಯೋಗಿ ಮಗನ ಕಿರುಕುಳದಿಂದ ಬೇಸರಗೊಂಡಿದ್ದ ಪೋಷಕರು ತಮ್ಮ ಮಗನನ್ನು ಕೊಲ್ಲಲು 8 ಲಕ್ಷ ರೂ ಸುಪಾರಿ ನೀಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸರ್ಕಾರಿ ಶಾಲೆಯ ಪ್ರಾಂಶುಪಾಲ ಶಾಲೆ ಪ್ರಿನ್ಸಿಪಾಲ್ ಕ್ಷತ್ರಿಯ ರಾಮ್ ಸಿಂಗ್ ಮತ್ತು ಅವರ ಹೆಂಡತಿ ರಾಣಿ ಬಾಯಿ ಅವರನ್ನು ಖಮ್ಮಮ್ ಪೊಲೀಸರು ಬಂಧಿಸಿದ್ದು, ಅವರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
26 ವರ್ಷದ ಸಾಯಿ ರಾಮ್ ಎಂಬ ಯುವಕನನ್ನು ಉಸಿರುಗಟ್ಟಿಸಿ ಕೊಂದ ಐವರು ಬಾಡಿಗೆ ಕೊಲೆಗಾರರ ಪೈಕಿ ನಾಲ್ವರನ್ನು ಕೂಡ ಬಂಧಿಸಲಾಗಿದ್ದು, ಒಬ್ಬಾತ ನಾಪತ್ತೆಯಾಗಿದ್ದಾನೆ.
ಪ್ರಕರಣದ ವಿವರ:
ಸಾಯಿ ರಾಮ್ನ ಮೃತದೇಹವನ್ನು ಅಕ್ಟೋಬರ್ 18ರಂದು ಸೂರ್ಯಪೇಟೆಯ ಮುಸಿಯಲ್ಲಿ ಎಸೆಯಲಾಗಿತ್ತು. ಮರುದಿನ ಅದು ಪತ್ತೆಯಾಗಿತ್ತು. ಅಪರಾಧ ಕೃತ್ಯದಲ್ಲಿ ಕುಟುಂಬದ ಕಾರು ಬಳಕೆಯಾಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೊಲೆಯಾದ ವ್ಯಕ್ತಿಯ ಪೋಷಕರ ಕಡೆಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಮಗ ನಾಪತ್ತೆಯಾಗಿದ್ದಾನೆ ಎಂದು ದಂಪತಿ ದೂರು ನೀಡಿರಲಿಲ್ಲ. ಅಕ್ಟೋಬರ್ 25ರಂದು ಮಗನ ಮೃತದೇಹ ಗುರುತಿಸಲು ದಂಪತಿ ಶವಾಗಾರಕ್ಕೆ ಅದೇ ಕಾರಿನಲ್ಲಿ ಬಂದಿರುವುದು ಕಂಡುಬಂದಿತ್ತು.
ಮರಿಪೇಡ ಬಾಂಗ್ಲಾ ಗ್ರಾಮದ ಸರ್ಕಾರಿ ಗುರುಕುಲದಲ್ಲಿ ರಾಮ್ ಸಿಂಗ್ ಅವರು ಪ್ರಾಂಶುಪಾಲರಾಗಿದ್ದು, ಅವರ ಮಗಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಕುಡಿಯಲು ಹಣ ಕೊಡಲು ನಿರಾಕರಿಸಿದಾಗ ಅಪ್ಪ ಅಮ್ಮನನ್ನು ಸಾಯಿ ರಾಮ್ ಮನಬಂದಂತೆ ಥಳಿಸಿ, ನಿಂದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಾಯಿ ರಾಮ್’ನನ್ನು ಹೈದರಾಬಾದ್’ನ ಮದ್ಯವರ್ಜನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಅದರಿಂದ ಯಾವ ಪ್ರಯೋಜನ ಕೂಡ ಆಗಿರಲಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ತಮ್ಮ ಮಗನನ್ನು ಕೊಲ್ಲಿಸಲು ದಂಪತಿ ರಾಣಿ ಬಾಯಿ ಅವರ ಸಹೋದರ ಸತ್ಯನಾರಾಯಣ ಅವರ ಸಹಾಯ ಕೋರಿದ್ದರು. ಮಿರ್ಯಾಲಗುಡ ಗ್ರಾಮದವರಾದ ಆರ್ ರವಿ, ಡಿ ಧರ್ಮ, ಪಿ ನಾಗರಾಜು, ಡಿ ಸಾಯಿ ಮತ್ತು ಬಿ ರಾಂಬಾಬು ಅವರನ್ನು ಸತ್ಯನಾರಾಯಣ ಸಂಪರ್ಕಿಸಿ ಸುಪಾರಿ ನೀಡಿದ್ದರು.
ಸುಪಾರಿ ಹಂತಕರಿಗೆ ದಂಪತಿ ಮುಂಗಡ 1.5 ಲಕ್ಷ ರೂ ನೀಡಿದ್ದರು. ಕೊಲೆ ಮಾಡಿದ ಮೂರು ದಿನಗಳ ಬಳಿಕ ಉಳಿದ 6.5 ಕೋಟಿ ರೂ ನೀಡುವುದಾಗಿ ಹೇಳಿದ್ದರು. ಅಕ್ಟೋಬರ್ 18ರಂದು ಸತ್ಯನಾರಾಯಣ ಮತ್ತು ರವಿ ಸೇರಿ ತಮ್ಮ ಕುಟುಂಬದ ಕಾರಿನಲ್ಲಿ ಸಾಯಿ ರಾಮ್’ನನ್ನು ಕಲ್ಲೆಪಲ್ಲಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಉಳಿದ ಆರೋಪಿಗಳಿದ್ದರು.
ಅಲ್ಲಿ ಸಾಯಿ ರಾಮ್ನನ್ನೂ ಕೂರಿಸಿಕೊಂಡು ಎಲ್ಲರೂ ಮದ್ಯ ಸೇವಿಸಿದ್ದರು. ಬಳಿ, ಹಗ್ಗದಿಂದ ಆತನ ಕತ್ತು ಬಿಗಿದು ಕೊಂದಿದ್ದರು. ಬಳಿಕ ಆತನ ದೇಹವನ್ನು ಮುಸಿಯಲ್ಲಿ ಎಸೆದುಹೋಗಿದ್ದರು ಎಂದು ಹುಜೂರಬಾದ್ ಸರ್ಕಲ್ ಇನ್ಸ್’ಪೆಕ್ಟರ್ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.