ಬೆಂಗಳೂರು(Bengaluru): ವೀಲಿಂಗ್ ಹಾಗೂ ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್ಸ್’ಪೆಕ್ಟರ್ ಸುಂದರ್ ನೇತೃತ್ವದ ತಂಡ ಆರೋಪಿಗಳಾದ ಶೇಕ್ ನಿಸಾರ್ (20), ಸಾಹಿಲ್ ಪಾಷಾ (27), ಶೇಕ್ ತೌಸಿಫ್ (21) ಬಂಧಿತರು.
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ಯಲಹಂಕ ನ್ಯೂ ಟೌನ್, ಬನಶಂಕರಿ, ರಾಜಾಜಿ ನಗರ, ಯಶವಂತಪುರ ಸೇರಿ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಎಸಗಿದ್ದ 23 ಬೈಕ್ ಕಳವು ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದರು. ಆರೋಪಿಗಳು ಕಳವು ಮಾಡಿದ್ದ ಬೈಕ್’ಗಳನ್ನು ಜಪ್ತಿ ಮಾಡಿರುವ ತನಿಖಾ ತಂಡ ವಿಸ್ತೃತ ತನಿಖೆ ಮುಂದುವರಿಸಿದೆ.
ಆರೋಪಿಗಳು ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಕುಡಿತ ಸೇರಿದಂತೆ ದುಶ್ಚಟಗಳನ್ನು ಕಲಿತಿದ್ದಾರೆ. ಈ ಹಿಂದೆ ಚಿಕ್ಕಜಾಲ, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಜಾಮೀನಿನ ಮೇರೆಗೆ ಹೊರಗಡೆ ಬಂದು ಬೈಕ್ ಕಳವು ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಮನೆ ಮುಂದೆ, ರಸ್ತೆ ಬದಿ, ಪಾರ್ಕಿಂಗ್ ಜಾಗಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಆರೋಪಿಗಳು ಕೆಲ ದಿನಗಳವರೆಗೆ ಕಳವು ಮಾಡಿದ ಬೈಕ್‌ಗಳಲ್ಲಿಯೇ ವೀಲಿಂಗ್ ಮಾಡಿ ತಿರುಗಾಡುತ್ತಿದ್ದರು. ಬಳಿಕ ಪರಿಚಯಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.