ಮನೆ ದೇವಸ್ಥಾನ ಹುಲುಗಿನ ಮುರುಡಿಯ ವೆಂಕಟರಮಣಸ್ವಾಮಿ ದೇವಾಲಯ

ಹುಲುಗಿನ ಮುರುಡಿಯ ವೆಂಕಟರಮಣಸ್ವಾಮಿ ದೇವಾಲಯ

0

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕು ತೆರಕಣಾಂಬಿಗೆ 7 ಕಿಲೋ ಮೀಟರ್ ದೂರದಲ್ಲಿರುವ ಪುಟ್ಟ ಬೆಟ್ಟವೇ ಹುಲುಗಿನ ಮುರಡಿ ಇದು ಚಿಕ್ಕತಿರುಪತಿ ಎಂದೂ ಖ್ಯಾತವಾಗಿದೆ.

ಇಲ್ಲಿರುವ ಪುರಾತನ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ನೋಡಲೇಬೇಕಾದ ಕ್ಷೇತ್ರಗಳಲ್ಲಿ ಒಂದು. ಸುಮಾರು 500 ವರ್ಷಗಳ ಹಿಂದೆ ಇಲ್ಲಿ ತೆರಕಣಾಂಬಿಯ ಶ್ರೀಮಂತರಾದ ದಾಸಕೇಶವಶೆಟ್ಟಿ ಎನ್ನುವವರು ಈಗಿರುವ ದೇವಾಲಯ ಕಟ್ಟಿಸಿದ್ದಾರೆ. 20 ವರ್ಷಗಳ ಹಿಂದೆ ರಾಜಗೋಪುರ ಸಮಿತಿ ವತಿಯಿಂದ ದೇವಾಲಯಕ್ಕೆ ಮೆಟ್ಟಿಲು ಹಾಗೂ ರಾಜಗೋಪುರ ಕಟ್ಟಿಸಲಾಗಿದೆ. ರಾಜಗೋಪುರದ ಭಿತ್ತಿಗಳಲ್ಲಿ ಪುರಾಣದ ದೃಶ್ಯಗಳನ್ನು ಸಿಮೆಂಟಿನಿಂದ ಮಾಡಿಸಲಾಗಿದೆ.

ಮೆಟ್ಟಿಲು ಹತ್ತಿ ರಾಜಗೋಪುರದ ಮಾರ್ಗದಲ್ಲಿ ದೇವಾಲಯ ಪ್ರವೇಶಿಸಿದರೆ ಮೊದಲಿಗೆ ಭೂದೇವಿ ಸಹಿತನಾದ ವರಹಸ್ವಾಮಿಯ ದರ್ಶನ ಆಗುತ್ತದೆ. ಮೇಲ್ಛಾವಣಿಯ ಆಧಾರ ಕಂಬಗಳಲ್ಲಿ ದಶಾವತಾದ ಶಿಲ್ಪಗಳಿವೆ. ಈ ಸುಂದರ ಶಿಲ್ಪಗಳಿಗೆ ಬಣ್ಣ ಹಚ್ಚಲಾಗಿದ್ದು ಸುಂದರವಾಗಿ ಕಾಣುತ್ತದಾದರೂ, ಅದರ ನೈಜ ಸೌಂದರ್ಯ ಮರೆಯಾಗಿದೆ. ಮಧ್ಯದಲ್ಲಿ ಶೇಷ ಶಯನನಾದ ರಂಗನಾಥನ ದೊಡ್ಡ ಶಿಲ್ಪವಿದೆ. ದೇವಾಲಯದ ಆವರಣದಲ್ಲಿ ಬಂಡೆಯಲ್ಲಿ ಕೆತ್ತಿದ ಆಂಜನೇಯನ ಸುಂದರ ಮೂರ್ತಿಯೂ ಇದೆ.

ದೇವಾಲಯದ ಹಿಂಭಾಗದಲ್ಲಿ ಕಲ್ಯಾಣಿ, ಮಂಟಪ ಮತ್ತು ಶಂಖ, ಚಕ್ರ ಸಹಿತವಾದ ವಿಷ್ಣುಪಾದವಿದೆ. ಇಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ವೀಕ್ಷಣಾ ಸ್ಥಳವೂ  ಇದ್ದು ಛಾಯಾಗ್ರಹಣಕ್ಕಂತೂ ಅತ್ಯುತ್ತಮ ತಾಣವಾಗಿದೆ.

ಐತಿಹ್ಯ – ಈ ಬೆಟ್ಟದ ಮೇಲೆ ಮಾಂಡವ್ಯ ಮಹರ್ಷಿಗಳು ಶ್ರೀನಿವಾಸ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ. ಮಂಡೂಕ ಅಂದರೆ ಕಪ್ಪೆ, ಮಾಂಡವ್ಯರು ಪ್ರತಿಷ್ಠಾಪಿಸಿದ ಈ ದೇವಾಲಯದ ಗರ್ಭಗೃಹದಲ್ಲಿ ಇಂದಿಗೂ ಋಷಿಗಳ ಸ್ವರೂಪಿಯಾಗಿ ಕಪ್ಪೆಯೊಂದು ದೇವರ ಸನ್ನಿಧಾನದಲ್ಲೇ ಇರುವುದು ವಿಶೇಷ.

ಕಾನನ ಪ್ರದೇಶವಾಗಿದ್ದ ಈ ಭಾಗದಲ್ಲಿ ಹಿಂದೆ ದೊಡ್ಡ ಸಂಖ್ಯಾಯಲ್ಲಿ ಹುಲಿಗಳು ವಾಸವಾಗಿದ್ದವು. ಮರಡಿ ಎಂದರೆ ಬೆಟ್ಟ. ಹೀಗಾಗಿ ಹುಲಿಗಳು ವಾಸಿಸುತ್ತಿದ್ದ ಬೆಟ್ಟಕ್ಕೆ ಹುಲಿಗುಡ್ಡ, ಹುಲಿಗಳ ಮರಡಿ ಎಂಬ ಹೆಸರು ಬಂತು, ಕಾಲಾನುಕ್ರಮದಲ್ಲಿ ಇಲ್ಲಿ ಹುಲಿಗಳೂ ಇಲ್ಲ ಆದರೆ ಹೆಸರು ಅಪಭ್ರಂಶವಾಗಿ ಹುಲುಗಿನ ಮುರುಡಿ ಆಗಿದೆ.

ಇಲ್ಲಿರುವ ಶ್ರೀನಿವಾಸ ದೇವರು ನಾಲ್ಕು ಯುಗದಲ್ಲೂ ಪೂಜೆಗೊಂಡಿದ್ದಾನೆ ಎಂದು ಅರ್ಚಕರಾದ ಜಯರಾಮು ಹೇಳುತ್ತಾರೆ. ವರಾಹಸ್ವಾಮಿ ಪುರಾಣದಲ್ಲಿ ಹುಲುಗಿನ ಮುರಡಿಯ ದೇವಾಲಯದ ಸ್ಥಳ ಮಹಾತ್ಮೆಯ ಉಲ್ಲೇಖ ಇದೆಯಂತೆ. ಅದರ ಪ್ರಕಾರ, ಒಮ್ಮೆ ವಾಯುದೇವ ಹಾಗೂ ಆದಿಶೇಷನ ನಡುವೆ  ಶಕ್ತಿ ಪರಾಕ್ರಮದಲ್ಲಿ ಯಾರು ದೊಡ್ಡವರು ಎಂಬ ಪಂದ್ಯ ಉಂಟಾಗತ್ತೆ. ಆಗ ಆದಿಶೇಷ ಭೂಮಿಯ ಮೇಲೆ ಇದ್ದ ಒಂದು ಪರ್ವತವನ್ನು ಸುತ್ತಿಕೊಂಡು ಬಿಗಿಯಾಗಿ ಹಿಡಿಯುತ್ತಾನೆ. ವಾಯುದೇವ ಆದಿಶೇಷನನ್ನು ಕದಲಿಸಲು ಜೋರಾಗಿ ಗಾಳಿ ಬೀಸುತ್ತಾನೆ. ಆದರೂ ಆದಿಶೇಷ ಅಲ್ಲಾಡುವುದಿಲ್ಲ. ಇನ್ನೂ ಜೋರಾಗಿ ವಾಯು ತನ್ನ ಪರಾಕ್ರಮ ತೋರಿದಾಗ ವಿಧಿ ಇಲ್ಲದೆ ಆದಿಶೇಷ ಪರ್ವತವನ್ನು ಬಿಟ್ಟು ಸರಿಯುತ್ತಾನೆ. ವಾಯು ಇದನ್ನು ಗಮನಿಸದೆ ಮತ್ತಷ್ಟು ಜೋರಾಗಿ ಗಾಳಿ ಬೀಸುತ್ತಾನೆ. ಆಗ ಪರ್ವತವೇ ಎರಡು ಭಾಗವಾಗಿ ಹಾರಿ ಹೋಗುತ್ತದೆ. ಹೀಗೆ ಹಾರಿದ ಪರ್ವತದ ಒಂದು ಭಾಗ ಉತ್ತರದಲ್ಲೂ ಮತ್ತೊಂದು ಭಾಗ ದಕ್ಷಿಣದಲ್ಲೂ ಬೀಳುತ್ತದೆ. ಹೀಗೆ ಹೋಗಿ ಉತ್ತರದಲ್ಲಿ ಬಿದ್ದ ಬೆಟ್ಟ ತಿರುಪತಿಯಾಗಿದ್ದು, ಇಲ್ಲಿರುವ ವೆಂಕಟೇಶ್ವರ ಶೇಷಾಚಲವಾಸಿಯಾಗಿದ್ದಾನೆ.

ಅದೇ ರೀತಿ ದಕ್ಷಿಣದಲ್ಲಿ ಬಂದು ಬಿದ್ದ ಈ ಬೆಟ್ಟ ಹುಲಗಿನ ಮುರುಡಿ ಅಥವಾ ದಕ್ಷಿಣ ಶೇಷಾಚಾಲವಾಗಿದೆಯಂತೆ. ಹೀಗಾಗಿ ತಿರುಪತಿಗೆ ಹೋಗಲಾಗದವರು ಇಲ್ಲಿಗೆ ಬಂದು ಸೇವೆ ಮಾಡಿಸಿದರೆ ತಿರುಪತಿ ದರ್ಶನ ಫಲವೇ ದೊರೆಯುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ತಿರುಪತಿಗೆ ಹೋಗಿ ಬಂದವರೂ ಕೂಡ ಅಲ್ಲಿ ಮಾಡಿಸಲು ಸಾಧ್ಯವಾಗದ ಅಭಿಷೇಕ, ಕಲ್ಯಾಣೋತ್ಸವ ಮೊದಲಾದ ಸೇವೆಗಳನ್ನು ಈ ದೇವಾಲಯದಲ್ಲಿ ಮಾಡಿಸುತ್ತಾರೆ.

800 ವರ್ಷಗಳಿಂದ ಇಲ್ಲಿ ಒಂದೇ ಕುಟುಂಬದವರು ದೇವರಿಗೆ ಪೂಜೆ ಮಾಡಿಕೊಂಡು ಬಂದಿದ್ದಾರೆ. 800 ವರ್ಷಗಳ ಹಿಂದೆ ತಮಿಳುನಾಡಿನಿಂದ ಯಾತ್ರೆಗೆ ಬಂದ ಅಣ್ಣ ತಮ್ಮ  ಇಲ್ಲಿ ಬಂದು ಈ ಬೆಟ್ಟದಲ್ಲಿದ್ದ ವೆಂಕಟೇಶ್ವರನ ಪೂಜೆ ಮಾಡಿ, ಅಲ್ಲೇ ಮಲಗಿದ್ದಾಗ ಅವರಿಗೆ ಕನಸು ಬೀಳುತ್ತದೆ. ನೀವಿಬ್ಬರೂ ಇಲ್ಲೇ ಇದ್ದು ನನ್ನ ಸೇವೆ ಮಾಡಿಕೊಂಡಿರಿ ಎಂದು ದೇವರ ಆಣತಿ ಆಗುತ್ತದೆ. ಆದರೆ ಹುಲಿಗಳ ಈ ಕಾಡಿನಲ್ಲಿ ಇರುವುದು ಹೇಗೆ ಎಂದು ಅವರು ಬೆಟ್ಟ ಇಳಿದು ಹೋಗುವಾಗ ಅವರಿಬ್ಬರ ಕಣ್ಣಿನ ದೃಷ್ಟಿ ಹೋಗುತ್ತದೆ. ತಾವು ಮಾಡಿದ್ದು ಅಪರಾಧ ಆಯಿತು ಇನ್ನು ಮುಂದೆ ಇಲ್ಲೇ ಇದ್ದು ನಿನ್ನ ಸೇವೆ ಮಾಡುತ್ತೇವೆ ಎಂದು ತಪ್ಪು ಕಾಣಿಕೆ ಹಾಕಿದಾಗ ಅವರಿಗೆ ಕಣ್ಣಿನ ದೃಷ್ಟಿ ಬಂತು, ಇಂದಿಗೂ ಅದೇ ಕುಟುಂಬದ ನಾಗರಾಜು ಮತ್ತು ಜಯರಾಮು ಅವರು ಸರದಿಯ ಪ್ರಕಾರ ದೇವರ ಸೇವೆ ಮಾಡುತ್ತಾ ಬಂದಿದ್ದಾರೆ ಎಂಬುದು ಅರ್ಚಕರು ನೀಡುವ ಮಾಹಿತಿ.

ಬೆಟ್ಟದಲ್ಲಿ ಪ್ರತಿವರ್ಷ ಸಂಕ್ರಾಂತಿಯಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಮೊದಲ ಶ್ರಾವಣ ಶನಿವಾರ ಚಿಕ್ಕ ರಥೋತ್ಸವ ಜರುಗುತ್ತದೆ. ದಸರಾ ಆದ ಮೇಲೆ ದ್ವಾದಶಿ ಮತ್ತು ತ್ರಯೋದಶಿ ಹಾಗೂ ಚತುರ್ದಶಿಯಂದು ಪವಿತ್ರೋತ್ಸವ ನಡೆಯುತ್ತದೆ.

ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5-30ರವರೆಗೆ ದೇವರ ದರ್ಶನಕ್ಕೆ ಅವಕಾಶಉಂಟು.