ಮನೆ ಯೋಗಾಸನ ಗೋಡೆ ಸಹಾಯದಿಂದ ಉಷ್ಟ್ರಾಸನ

ಗೋಡೆ ಸಹಾಯದಿಂದ ಉಷ್ಟ್ರಾಸನ

0

ವಿವರಣೆ :- ಜಮಖಾನವನ್ನು ಗೋಡೆಗೆ ತಾಗಿದಂತೆ ನೆಲದ ಮೇಲೆ ಹಾಸಬೇಕು. ನಂತರ ಒಂದು ದಿಂಬು ಅಥವಾ ಮತ್ತೊಂದು ಜಮಖಾನವನ್ನು ಮಡಿಸಿ ಗೋಡೆಗೆ ತಾಗಿಸಿಡಬೇಕು. ಈಗ ಗೋಡೆಯ ಕಡೆಗೆ ಅಭಿಮುಖ ಮಾಡಿ ದಿಂಬಿನ ಮೇಲೆ ವಜ್ರಾಸನದಲ್ಲಿ ಕುಳಿತು ಕೊಳ್ಳಬೇಕು.

ಈ ಸ್ಥಿತಿಯಲ್ಲಿ ಮಂಡಿಗಳೂ ಗೋಡೆಗೆ ತಾಗಿರಲಿ. ಈಗ ನಿಧಾನವಾಗಿ ಮಂಡಿಗಳ ಮೇಲೆ ನಿಂತು ತೊಡೆಗಳ ಮುಂಭಾಗವನ್ನು ಗೋಡೆಗೆ ತಾಗಿಸಬೇಕು. ಮಂಡಿಯಿಂದ ತೊಡೆಯ ಮೂಲದವರೆಗೆ ಗೋಡೆಗೆ ಒತ್ತಿರಬೇಕು. ನಂತರ ನಿಧಾನವಾಗಿ ಹಿಂದೆ ಬಾಗಿ, ಅಂಗಾಲುಗಳ ಮೇಲೆ ಹಸ್ತವನ್ನು ಊರಬೇಕು. ಬೆನ್ನನ್ನು ಹಿಂದೆ ಬಾಗಿಸಿರಬೇಕು. ಹೊಟ್ಟೆಯನ್ನು ಒಳಗೆಳೆದು ಎದೆಯನ್ನು ಮೇಲೆ ಎತ್ತಿರಬೇಕು.

ದೃಷ್ಟಿ ಮೇಲ್ಮುಖವಾಗಿರಲಿ. ಮೊಣಕಾಲುಗಳು ಕೆಳಗೆ ದಿಂಬಿನ ಮೇಲಿರಲಿ. ಈ ಆಸನದಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ನಂತರ ವಾಪಸ್ ಬರಬೇಕು.

ಉಪಯೋಗ :- ಉಷ್ಟ್ರಾಸನ ಮಾಡುವಾಗ ಸಾಮಾನ್ಯವಾಗಿ ಸೊಂಟದ ಭಾಗವು ಮಂಡಿಗಿಂತ ಹಿಂದೆ ಬರುತ್ತದೆ. ಇದರಿಂದ ಸೊಂಟದ ಭಾಗ ಕುಸಿಯಲ್ಪಡುತ್ತದೆ ಹಾಗೂ ಶರೀರದ ಭಾಗ ಮೊಣಕಾಲುಗಳ ಮೇಲೆ ಬಿದ್ದು ಸ್ಥಿತಿಯಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಾಗುವುದಿಲ್ಲ.

ಆದರೆ ಈ ರೀತಿ ಅಭ್ಯಾಸ ಮಾಡುವುದರಿಂದ (ತೊಡೆಯನ್ನು ಗೋಡೆಗೆ ತಾಗಿಸುವುದರಿಂದ) ಸೊಂಟದ ಭಾಗ ಮಂಡಿಯ ನೇರದಲ್ಲಿರುವುದು ಮತ್ತು ಕುಸಿಯದಂತೆ ತಡೆಯುವುದು. ಈ ಆಸನವನ್ನು ಸೌಂದರ್ಯಾಸನವೆಂದೂ ಕರೆಯುತ್ತಾರೆ.

ಈ ಆಸನದಿಂದ ಶರೀರದಲ್ಲಿನ ಅನವಶ್ಯಕ ಕೊಬ್ಬಿನಂಶ ಕರಗುವುದು. ಬೆನ್ನು ಮೂಳೆ ಉತ್ತೇಜನ ಪಡೆಯುವುದು. ಥೈರಾಯ್ಡ್ ಮತ್ತು ಅನ್ನನಾಳದಲ್ಲಿನ ಸಮಸ್ಯೆ ದೂರವಾಗುವುದು.