ಮನೆ ದೇವಸ್ಥಾನ ತೆರಕಣಾಂಬಿ ಲಕ್ಷ್ಮೀ ವರದರಾಜ ಸ್ವಾಮಿ ದೇವಾಲಯ

ತೆರಕಣಾಂಬಿ ಲಕ್ಷ್ಮೀ ವರದರಾಜ ಸ್ವಾಮಿ ದೇವಾಲಯ

0

ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿಗೆ ಸೇರಿದ  ತೆರಕಣಾಂಬಿ ಚಿಕ್ಕ ಊರಾದರೂ ಇದರ ಇತಿಹಾಸ,  ದೊಡ್ಡದು.

ಪುರಾತನವಾದ ಹಾಗೂ ಐತಿಹಾಸಿಕ ಮಹತ್ವದ ಈ ಊರು ಕದಂಬರು, ಚೋಳರು, ಹೋಯ್ಸಳರು, ಉಮ್ಮತ್ತೂರು ಅರಸರು, ವಿಜಯನಗರದ ಅರಸರು, ಮೈಸೂರು ಒಡೆಯರ ಮನೆತನದವರು ಆಳಿದ ನಾಡು ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಊರಿನಲ್ಲಿಯೇ ರಣಧೀರ ಕಂಠೀರವ ಒಡೆಯರ್ ಅವರು ತಮ್ಮ ಬಾಲ್ಯವನ್ನು ಕಳೆದದ್ದು ಮತ್ತು ಹಲವಾರು ಜಟ್ಟಿಗಳನ್ನು ಸೋಲಿಸಿದ್ದು ಎಂದು ಇತಿಹಾಸ ಹೇಳುತ್ತದೆ.

ಕೋಟೆ ಕೊತ್ತಲಗಳಿಂದ ಕೂಡಿದ್ದ ಈ ಊರಿನ ಮೇಲೆ ಕ್ರಿ.ಶ. 1774ರಲ್ಲಿ ಮರಾಠರು ದಾಳಿ ಮಾಡಿದಾಗ ಇಲ್ಲಿದ್ದ ಹಲವು ದೇವಾಲಯಗಳು, ಕೋಟೆ, ಕೊತ್ತಲ, ಅರಮನೆಗಳು ನಾಶವಾದವು, ಲೂಟಿಯಾದವು ಎಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ.

ಊರಿನಲ್ಲಿ ಪ್ರಸ್ತುತ 12ಕ್ಕೂ ಹೆಚ್ಚು ಪುರಾತನ ದೇವಾಲಯಗಳಿವೆ. ಇವುಗಳ ಪೈಕಿ 9 ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು  ನಡೆಯುತ್ತವೆ.

ಇಲ್ಲಿರುವ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯ ಪ್ರಮುಖವಾದದ್ದು. ಈ ದೇವಸ್ಥಾನವನ್ನು 1303ರಲ್ಲಿ ಪೆರುಮಾಳ್ ಧಣನಾಯಕರ ಮಗ ಮಾಧವ ಧಣ ನಾಯಕ ಕಟ್ಟಿಸಿದರು ಎಂಬ  ಉಲ್ಲೇಖ ಇದೆ.

ಸುಂದರವಾದ ಈ ದೇವಾಲಯವನ್ನು ನಂತರ ಮೈಸೂರು ಅರಸರಾದ ಕೃಷ್ಣರಾಜ ಒಡೆಯರು ವಿಸ್ತರಿಸಿದರು ಎಂದು ಇತಿಹಾಸ ಸಾರುತ್ತದೆ. ಬಹಳ ಶಿಥಿಲವಾಗಿ ಸೋರುತ್ತಿದ್ದ ಈ ದೇವಾಲಯವನ್ನು ಇತ್ತೀಚೆಗೆ ಅಂದರೆ 2000 ಇಸವಿಯಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಹಾಗೂ ಗ್ರಾಮಸ್ಥರ ನೆರವಿನಿಂದ  ಜೀರ್ಣೋದ್ಧಾರ ಮಾಡಲಾಗಿದೆ.

ದೇವಾಲಯದ ಮುಂದಿರುವ ಏಕಶಿಲೆಯ ಎತ್ತರವಾದ ಗರುಡಗಂಬ ಆಕರ್ಷಿಸುತ್ತದೆ. ಕಡುಗಲ್ಲಿನ ಈ ಕಂಬದಲ್ಲಿ ಸುಂದರವಾದ ಹೂಬಳ್ಳಿವೆ. ಕೆಳಗೆ ಕಂಬದಲ್ಲಿ ಮುಖವಷ್ಟೇ ಕಾಣುವ ವಿಗ್ರಹವಿದ್ದು, ಬಹುಶಃ ಕಂಬ ಇನ್ನೂ ಆಳದಲ್ಲಿದ್ದು, ಮೇಲೆ ಮಣ್ಣು ಮುಚ್ಚಿರಬಹುದು, ಕಟ್ಟೆಯೂ ಇದ್ದಿರಬಹುದು ಎಂದು ಅನಿಸುತ್ತದೆ.

ಇಲ್ಲಿರುವ ದೇವಾಲಯದ ಪ್ರವೇಶ ದ್ವಾರದಲ್ಲೂ ಹೆಚ್ಚೇನೂ ಕೆತ್ತನೆ ಇಲ್ಲದಿದ್ದರೂ ಅರೆಗಂಬಗಳಿಂದ ಕೂಡಿದ್ದು,  ಮನಸೆಳೆಯುತ್ತದೆ.

ಹೊಯ್ಸಳರ ಕಾಲಕ್ಕೆ ಸೇರಿದ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ನಿಂತಿರುವ ಭಂಗಿಯಲ್ಲಿರುವ ಶ್ರೀ ವರದರಾಜ ಸ್ವಾಮಿಯ ಸುಂದರ ವಿಗ್ರಹವಿದೆ. ಗರ್ಭಗೃಹದ ದಕ್ಷಿಣಕ್ಕೆ ಕುಳಿತಿರುವ ಭಂಗಿಯಲ್ಲಿ ಒಂದು ಮೀಟರ್ ಎತ್ತರದ ಲಕ್ಷ್ಮೀದೇವಿಯ ಗುಡಿಯಿದೆ.

ದೇವಾಲಯದ ಒಳ ಪ್ರಾಕಾರದಲ್ಲಿ ಅನೇಕ ಕಂಬಗಳಿಂದ ಕೂಡಿದ ನವರಂಗ, ಕಲಾಸಾಕಾರದ ಅಲಂಕೃತಗೊಂಡ ಮಹಾದ್ವಾರವಿದೆ. 2ನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ರಚನೆಯಾದ ನವರಂಗಿವಿದೆಂದು ಹೇಳಲಾಗುತ್ತದೆ.

ದೇವಾಲಯಕ್ಕೆ ವಿಶಾಲವಾದ ಒಳ ಪ್ರದಕ್ಷಣ ಪ್ರಾಕಾರವಿದ್ದು,  ಒಳ ಪ್ರಾಕಾರದ ಮೇಲೆ ಮುಂಭಾಗದಲ್ಲಿ ಮಾತ್ರವೇ ಗೋಪುರ ಗೂಡುಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ರಂಗನಾಥ ಸ್ವಾಮಿ, ವಿಷ್ಣು ಮೂರ್ತಿ ಮೊದಲಾದ ದೇವತಾ ವಿಗ್ರಹಗಳಿವೆ. ಬಾಲ ಕೃಷ್ಣ, ಬಾಲ ಬಲರಾಮ ಮತ್ತು ಹಾಲುಣಿಸುತ್ತಿರುವ ಯಶೋಧೆಯ ಕಂಚಿನ ವಿಗ್ರಹಗಳೂ ಇಲ್ಲಿವೆ. ದೇವಾಲಯದ ಒಳ ಪ್ರವೇಶಿಸುತ್ತಿದ್ದಂತೆ ಗಣೇಶ, ಗರುಡ ಇತ್ಯಾದಿ ಮೂರ್ತಿಗಳು ಗಮನ ಸೆಳೆಯುತ್ತವೆ. ಗರ್ಭಗುಡಿಯಲ್ಲಿ ಸುಂದರವಾದ ವರದರಾಜ ಸ್ವಾಮಿಯ ಮೂರ್ತಿಯಿದೆ ಹಾಗೂ ಪಕ್ಕದಲ್ಲಿ ಲಕ್ಷ್ಮೀ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಪ್ರಾಕಾರದಲ್ಲಿರುವ ಶಂಖ, ಚಕ್ರ, ಗದಾಧಾರಿಯಾದ ಕುಳಿತಿರುವ ಭಂಗಿಯಲ್ಲಿರುವ ವಿತಕೇನರ ವಿಗ್ರಹವೂ ಮನಮೋಹಕವಾಗಿದೆ. ಸ್ವಾತಂತ್ರ್ಯಾಪೂರ್ವದಲ್ಲೇ ನಿಂತು ಹೋಗಿದ್ದ ಜಾತ್ರಾ ಮಹೋತ್ಸವವನ್ನು ಮತ್ತೆ 2010ರಿಂದ ಆರಂಭಿಸಲಾಗಿದ್ದು, ಈಗ ಪ್ರತಿವರ್ಷ ಇಲ್ಲಿ ಬ್ರಹ್ಮ ರಥೋತ್ಸವ ಜರುಗುತ್ತದೆ.

ಚಾಮರಾಜನಗರದಿಂದ 28 ಕಿ.ಮೀ ಮತ್ತು ಗುಂಡ್ಲುಪೇಟೆಯಿಂದ 12 ಕಿ.ಮೀ. ದೂರದಲ್ಲಿರುವ ತೆರಕಣಾಂಬಿಯಲ್ಲಿ ಮುಖ್ಯರಸ್ತೆಯ ಪಕ್ಕದಲ್ಲೇ ಈ ದೇವಾಲಯವಿದೆ. ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯ ಪಕ್ಕದಲ್ಲೇ ಈ ಪುರಾತನ ದೇವಾಲಯ ಕಾಣುತ್ತದೆ.