ಚಾಮರಾಜನಗರ(Chamarajanagara): ಕೇಸರಿ ಬಣ್ಣ ತ್ಯಾಗದ ಪ್ರತೀಕ. ಎಲ್ಲರೂ ಗೌರವ ಕೊಡುತ್ತಾರೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಸಂಸದ ವಿ.ಶ್ರೀನಿವಾಸ ಪ್ರಸಾದ್
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಟಿಪ್ಪು ಪ್ರತಿಮೆಯನ್ನು ಅವರ ಸ್ವಂತಕ್ಕೆ ಮಾಡಿಕೊಂಡರೆ ಅದರಲ್ಲೇನೂ ತಪ್ಪಿಲ್ಲ. ತೊಂದರೆಯೂ ಇಲ್ಲ. ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಮಾಡಬಾರದು ಎಂದು ಈಗಾಗಲೇ ತೀರ್ಮಾನವಾಗಿದೆ. ಮುಸ್ಲಿಂ ಸಮುದಾಯದವರು ಪ್ರತಿಮೆ ನಿರ್ಮಿಸಿದರೆ, ಜಯಂತಿ ಆಚರಿಸಿದರೆ ಅಭ್ಯಂತರವಿಲ್ಲ. ಮುಸ್ಲಿಮರಲ್ಲಿ ಪ್ರತಿಮೆ ಸಂಸ್ಕೃತಿ, ವಿಗ್ರಹಾರಾಧನೆ ಇಲ್ಲ. ಹಾಗಾಗಿ, ಅವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್, ಕೋಲಾರ ಅತ್ಯಂತ ಸುರಕ್ಷಿತ ಕ್ಷೇತ್ರ ಎಂದು ಅಲ್ಲಿಗೆ ಹೋಗಿದ್ದಾರೆ. ಸುರಕ್ಷಿತ ಅಲ್ಲದಿದ್ದರೆ ಬಾದಾಮಿಯಲ್ಲಿ ಯಾಕೆ ನಿಲ್ಲುವುದಿಲ್ಲ? ಚಾಮುಂಡೇಶ್ವರಿಯಲ್ಲಿ ಯಾಕೆ ಸ್ಪರ್ಧಿಸುವುದಿಲ್ಲ? ಚಾಮರಾಜಪೇಟೆಗೂ ಹೋಗಿ ಬಂದರು. ಕೊನೆಗೆ ಕೋಲಾರಕ್ಕೆ ಹೋಗಿದ್ದಾರೆ. ಅಲ್ಲಿ ಕುರುಬರು, ಮುಸ್ಲಿಮರು ಹೆಚ್ಚಾಗಿದ್ದಾರೆ. ಸುಲಭವಾಗಿ ಗೆದ್ದು ಮುಖ್ಯಮಂತ್ರಿಯಾಗಬಹುದು ಎಂದು ಅಲ್ಲಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.