ಮನೆ ರಾಜ್ಯ ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ: ಯುವ ಮತದಾರರ ನೋಂದಣಿಗೆ ವಿಶೇಷ ಅಭಿಯಾನ

ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ: ಯುವ ಮತದಾರರ ನೋಂದಣಿಗೆ ವಿಶೇಷ ಅಭಿಯಾನ

0

ಮೈಸೂರು(Mysuru): ಯುವ ಮತದಾರರ ನೋಂದಣಿ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ನವೆಂಬರ್  22 ಹಾಗೂ 23 ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅರ್ಹ ಯುವ ಮತದಾರರ ನೋಂದಣಿ ಮಾಡಿಸಲು ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಪದವಿ ಪೂರ್ವ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ನೇಮಕಗೊಂಡ ನೋಡಲ್ ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಯುವ ಮತದಾರರ ನೋಂದಣಿಯಾಗಿರುವ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಅರ್ಹ ಯುವ ಮತದಾರರ ನೋಂದಣಿಯನ್ನು ಹೆಚ್ಚಿಸಲು ಹಾಗೂ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟು ಹೋಗದಂತೆ ಕ್ರಮ ವಹಿಸಬೇಕಾಗಿರುತ್ತದೆ. ಈ ಸಂಬಂಧ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇರುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಪದವಿ ಪೂರ್ವ ಮಟ್ಟದ ಎಲ್ಲಾ ಕಾಲೇಜುಗಳಲ್ಲಿ, ಎಲ್ಲಾ ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ, ಡೆಂಟಲ್ ಕಾಲೇಜು, ಆಯುರ್ವೇದ ಕಾಲೇಜು, ನರ್ಸಿಂಗ್ ಕಾಲೇಜು, ಇಂಜಿನಿಯರಿಂಗ್   ಹಾಗೂ ಡಿಪ್ಲೋಮಾ   ಕಾಲೇಜು ಹಾಗೂ ಇಲಾಖೆಯ ಎಲ್ಲಾ ಹಾಸ್ಟೆಲ್‌ಗಳ ಮೂಲಕ ಅರ್ಹ ಯುವ ಮತದಾರರ ನೋಂದಣಿಗೆ ಮತ್ತು ಮಾನ್ಯ ಭಾರತ ಚುನಾವಣಾ ಆಯೋಗವು ಕಲ್ಪಿಸಿರುವ ಅವಕಾಶದಂತೆ 17+ ವಯಸ್ಸಿನ ಯುವಕರಿಗೆ ಮುಂಗಡ ಅರ್ಜಿ ಸಲ್ಲಿಸಲು ಕಲ್ಪಸಿರುವ ಸೌಲಭ್ಯದಂತೆ ನೋಂದಣಿ ಮಾಡಿಸಲು ಪ್ರಜಾ ಪ್ರಭುತ್ವಕ್ಕಾಗಿ ಒಂದು ಗಂಟೆ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಯುವ ಮತದಾರರು ತಮ್ಮು ನೋಂದಣಿ ಮಾಡಿಕೊಳ್ಳಲು ಮೊಬೈಲ್‌ಗಳಲ್ಲಿ ವೋಟರ್ಸ್ ಹೆಲ್ಪ್’ಲೈನ್ ಆಪ್ (VHA) ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ಈ ಸೌಲಭ್ಯವನ್ನು ಯುವ ಮತದಾರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಗೂ ವಿಶೇಷ ಅಭೀಯಾನವನ್ನು ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ಮಂಜುನಾಥಸ್ವಾಮಿ, ಚುನಾವಣಾ ತಹಶೀಲ್ದಾರ್ ರಾಮ್‌ಪ್ರಸಾದ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.