ಮನೆ Uncategorized ಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ನಿರ್ದೇಶಿಸಿದ ಬಾಂಬೆ ಹೈಕೋರ್ಟ್: ತಯಾರಿಕೆಗೆ ಸಮ್ಮತಿ, ಮಾರಾಟಕ್ಕಿಲ್ಲ ಅನುಮತಿ

ಜಾನ್ಸನ್ಸ್ ಬೇಬಿ ಪೌಡರ್ ಹೊಸ ಪರೀಕ್ಷೆಗೆ ನಿರ್ದೇಶಿಸಿದ ಬಾಂಬೆ ಹೈಕೋರ್ಟ್: ತಯಾರಿಕೆಗೆ ಸಮ್ಮತಿ, ಮಾರಾಟಕ್ಕಿಲ್ಲ ಅನುಮತಿ

0

ಮುಂಬೈನ ಮುಲುಂಡ್ ಕೈಗಾರಿಕಾ ಪ್ರದೇಶದಲ್ಲಿ ಬೇಬಿ ಪೌಡರ್ ತಯಾರಿಕೆಗ ಜಾನ್ಸನ್ ಪ್ರೈವೇಟ್ ಲಿಮಿಟೆಡ್ಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದರೆ ಅದರ ಮಾರಾಟ ಮತ್ತು ವಿತರಣೆಗೆ ಅಸಮ್ಮತಿ ಸೂಚಿಸಿದೆ.

ಮುಲುಂಡ್ ಫೆಸಿಲಿಟೀಸ್’ನಲ್ಲಿ ತಯಾರಿಸಲಾಗುವ ಬೇಬಿ ಪೌಡರ್ ಮಾದರಿಗಳನ್ನು ಹೊಸ ಪರೀಕ್ಷೆಗಾಗಿ  ಮೂರು ಪ್ರಯೋಗಾಲಯಗಳಿಗೆ ಕಳುಹಿಸುವಂತೆ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್’ಡಿಎ) ನ್ಯಾಯಮೂರ್ತಿಗಳಾದ ಎಸ್ ವಿ ಗಂಗಾಪುರವಾಲಾ ಮತ್ತು ಎಸ್ ಜಿ ದಿಗೆ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.

ಮಹಾರಾಷ್ಟ್ರದಲ್ಲಿರುವ ತನ್ನ ಬೇಬಿ ಪೌಡರ್  ಉತ್ಪಾದನಾ ಪರವಾನಗಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಸಂಸ್ಥೆ ನಿಶಿತ್ ದೇಸಾಯಿ ಅಂಡ್ ಅಸೋಸಿಯೇಟ್ಸ್ ಮೂಲಕ ಜಾನ್ಸನ್ ಅಂಡ್ ಜಾನ್ಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಸೆಪ್ಟೆಂಬರ್ 15ರಂದು ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಿ ಡಿಸೆಂಬರ್ 15, 2022 ರಿಂದ ಜಾರಿಗೆ ಬರುವಂತೆ ಎಫ್ಡಿಎ ಆದೇಶ ಹೊರಡಿಸಿದೆ. ಐದು ದಿನಗಳ ಬಳಿಕ ಆದೇಶ ಪರಿಶೀಲಿಸಿದ ಎಫ್ಡಿಎ ಆಯುಕ್ತರು ತಕ್ಷಣವೇ ಜಾರಿಗೆ ಬರುವಂತೆ ಮುಂಬೈನ ಮುಲುಂಡ್ ಪ್ರದೇಶದಲ್ಲಿ ತಯಾರಿಸಿದ ಬೇಬಿ ಪೌಡರ್ ತಯಾರಿಕೆ ಮತ್ತು ಮಾರಾಟ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಹೆಚ್ಚುವರಿ ಸರ್ಕಾರಿ ಪ್ಲೀಡರ್ ಮಿಲಿಂದ್ ಮೋರೆ ಅವರು ನ್ಯಾಯಾಲಯದ ಹಿಂದಿನ ವಿಚಾರಣೆ ವೇಳೆ ನೀಡಿದ್ದ ಆದೇಶದಂತೆ ಬೇಬಿ ಪೌಡರ್ ಪರೀಕ್ಷೆಗಾಗಿನ ಪ್ರಯೋಗಾಲಯಗಳ ಪಟ್ಟಿಯನ್ನು ಇಂದು ಸಲ್ಲಿಸಿದರು. ದೋಷ ತಪ್ಪಿಸುವ ಸಲುವಾಗಿ ಮೂರು ಪ್ರಯೋಗಾಲಯಗಳನ್ನು ಆಯ್ದುಕೊಳ್ಳುವಂತೆ ನ್ಯಾಯಾಲಯ ಪಕ್ಷಕಾರರಿಗೆ ಸೂಚಿಸಿತು.

ಬೇಬಿ ಪೌಡರ್ “ಮಾದರಿಗಳನ್ನು 2-3 ಪ್ರಯೋಗಾಲಯಗಳಿಗೆ ಕಳಿಸುವಂತೆ ನಾವು ನಿರ್ದೇಶಿಸುತ್ತಿದ್ದೇವೆ. ಯಾವುದೇ ದೋಷ ಇರಬಾರದು. ಕೇವಲ ಒಂದು ಪ್ರಯೋಗಾಲಯಕ್ಕೆ ನಾವು ಮಾದರಿ ಕಳಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿತು. ಪಕ್ಷಕಾರರು ಒಪ್ಪಿದ ಮೂರು ಪ್ರಯೋಗಾಲಯಗಳಿಗೆ ಮಾದರಿಗಳನ್ನು ಕಳುಹಿಸಿಕೊಡುವಂತೆ ವಿವಿಧ ಸೂಚನೆಗಳೊಡನೆ ನ್ಯಾಯಾಲಯ ಆಜ್ಞಾಪಿಸಿತು.