ಮನೆ ಅಪರಾಧ ಆಕ್ಯುಪಂಕ್ಚರ್​​’ಗೆ ಚಿಕಿತ್ಸೆ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ: ನಕಲಿ ವೈದ್ಯನ ಬಂಧನ

ಆಕ್ಯುಪಂಕ್ಚರ್​​’ಗೆ ಚಿಕಿತ್ಸೆ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ: ನಕಲಿ ವೈದ್ಯನ ಬಂಧನ

0

ಬೆಂಗಳೂರು(Bengaluru): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಕ್ಯುಪಂಕ್ಚರ್​​ ಕ್ಲಿನಿಕ್​ ತೆಗೆದು ಚಿಕಿತ್ಸೆ ನೀಡುವ ನೆಪದಲ್ಲಿ ಬಾಲಕಿಯರು, ಯುವತಿಯರು ಹಾಗೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಕಲಿ ವೈದ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಮತ್ತಿಕೆರೆಯಲ್ಲಿ ನ್ಯಾಚುರೋಪಥಿ ಮತ್ತು ಆಕ್ಯುಪಂಕ್ಚರ್​ ಕ್ಲಿನಿಕ್​ ತೆರೆದು ನಡೆಸುತ್ತಿದ್ದ ವೆಂಕಟರಮಣ್​ (57) ಬಂಧಿತ ಆರೋಪಿ.

ಯಶವಂತಪುರ, ಬಸವನಗುಡಿ ಮತ್ತು ಸಿಇಎನ್​ ಠಾಣೆಯಲ್ಲಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಗುತ್ತಿ ಮೂಲದ ವೆಂಕಟರಮಣ್​ ಅಲಿಯಾಸ್​ ವೆಂಕಟ್, ಜಾಲಹಳ್ಳಿಯ ಬಿಇಎಲ್​ ಶಾಲೆ ಮತ್ತು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ ಮಾರತ್​ಹಳ್ಳಿಯ ಪಿಟಿಲೆಟ್​ ಇಂಡಸ್ಟ್ರೀಟ್​ ಕಂಪನಿಯಲ್ಲಿ 10 ವರ್ಷ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಆಗಿದ್ದ.

ಇದರ ನಡುವೆ ವೈದ್ಯರೊಬ್ಬರ ಸಹಾಯದಿಂದ ಮೆಜೆಸ್ಟಿಕ್’​ನಲ್ಲಿನ ಆರ್ಯುರ್ವೇದ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವೆಂಕಟರಮಣ್​ ಭಾಗವಹಿಸಿದ್ದ. ಈ ವೇಳೆ ಜಯನಗರ 4ನೇ ಹಂತದಲ್ಲಿ ಆಕ್ಯೂಪೈ ಇ.ಎಂ. ಇನ್​ಸ್ಟಿಟ್ಯೂಟ್​ ಬಗ್ಗೆ ಮಾಹಿತಿ ಪಡೆದು ಅಲ್ಲಿ 2 ವರ್ಷ ಕಾಲ ತರಬೇತಿ ಪಡೆದಿದ್ದ. ಇದರ ಆಧಾರದ ಮೇಲೆ ಮನೆಯ ಬಳಿ 2018ರಲ್ಲಿ ಆಕ್ಯುಪಂಕ್ಚರ್​ ಕ್ಲಿನಿಕ್​ ತೆರೆದು ಚಿಕಿತ್ಸೆ ನೀಡಲು ಶುರು ಮಾಡಿದ್ದ.

ಕ್ಲಿನಿಕ್’​ಗೆ ಬರುತ್ತಿದ್ದ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಬಟ್ಟೆಗಳನ್ನು ತೆಗೆಸಿ ಅಂಗಾಂಗಗಳನ್ನು ಮುಟ್ಟುತ್ತಿದ್ದ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ರೋಗಿಗಳು ಪ್ರಶ್ನಿಸಿದರೆ ಚಿಕಿತ್ಸೆ ನೀಡುವುದು ಇದೇ ರೀತಿ ಎಂದು ಸಬೂಬು ಹೇಳಿ ಸುಮ್ಮನಾಗಿಸುತ್ತಿದ್ದ.

ರೋಗಿಗಳ ಅರೆನಗ್ನ ವಿಡಿಯೋ, ಫೋಟೋಗಳನ್ನು ಅವರಿಗೇ ಗೊತ್ತಿಲ್ಲದಂತೆ ತನ್ನ ಮೊಬೈಲ್​ನಲ್ಲಿ ರಹಸ್ಯವಾಗಿ ಸೆರೆ ಹಿಡಿದುಕೊಂಡು ವಿಕೃತಿ ಮೆರೆಯುತ್ತಿದ್ದ.

2 ವರ್ಷದ ಬಾಲಕಿಗೆ ಕಿರುಕುಳ: 

ಚಿಕಿತ್ಸೆಗೆ ಬಂದ 12 ವರ್ಷದ ಬಾಲಕಿಗೂ ವೆಂಕಟರಮಣ್​, ಚಿಕಿತ್ಸೆ ನೀಡುವ ನೆಪದಲ್ಲಿ ಆಕೆಯ ಬಟ್ಟೆ ತೆಗೆಸಿ ಅರೆನಗ್ನ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದ. ಈ ಬಗ್ಗೆ ನೊಂದ ಪಾಲಕರು, ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದರು.

ಮೊಬೈಲ್​ನಲ್ಲಿ ಹಲವು ವಿಡಿಯೋ: 

ಎಂಟು ತಿಂಗಳ ಹಿಂದೆ ಮಹಿಳೆಯೊಬ್ಬರು ಬಲಗಾಲು ಊದಿಕೊಂಡಿದ್ದ ಕಾರಣ ಚಿಕಿತ್ಸೆಗೆಂದು ವೆಂಕಟರಮಣ್​ ಕ್ಲಿನಿಕ್​ಗೆ ಹೋಗಿದ್ದರು. 20 ಬಾರಿ ಚಿಕಿತ್ಸೆ ಪಡೆದಿದ್ದರು. ಇದರಲ್ಲಿ ಐದು ಬಾರಿ ಕ್ಲಿನಿಕ್​ಗೆ ಮಹಿಳೆಯ ಪತಿ ಹೋಗಿರಲಿಲ್ಲ. ಈ ವೇಳೆ ಕಾಲಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಬಟ್ಟೆ ತೆಗೆಸಿ ಚಿಕಿತ್ಸೆ ಕೊಡಲು ಮುಂದಾದಾಗ ಮಹಿಳೆ ಪ್ರಶ್ನಿಸಿದ್ದರು. ಅದಕ್ಕೆ ನಿಮ್ಮ ಪತಿಗೆ ವಿಷಯ ತಿಳಿಸಿದ್ದೇನೆ ಎಂದು ಸುಳ್ಳು ಹೇಳಿ ಅವರ ಅರೆನಗ್ನ ವಿಡಿಯೋ ಮಾಡಿಕೊಂಡಿದ್ದ.

ಇದಾದ ಕೆಲ ತಿಂಗಳ ಬಳಿಕ ಮತ್ತೊಬ್ಬ ಮಹಿಳೆ ಹೋದಾಗ ಅವರಿಗೆ ಸಬೂಬು ಹೇಳಿ ಬಟ್ಟೆ ತೆಗೆಸಿ ಚಿಕಿತ್ಸೆ ನೀಡುವ ನೆಪದಲ್ಲಿ ಅರೆನಗ್ನ ವಿಡಿಯೋ ಮಾಡುತ್ತಿದ್ದಾಗ ಸಂತ್ರಸ್ತೆ ನೋಡಿದ್ದಾರೆ. ತಕ್ಷಣ ವೆಂಕಟರಮಣ್’​ನ ಮೊಬೈಲ್​ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ಹಲವು ಅಶ್ಲೀಲ ವಿಡಿಯೋ ಇರುವುದು ಗೊತ್ತಾಗಿ ನಕಲಿ ವೈದ್ಯನ ನಿಜ ಬಣ್ಣ ಬಯಲಾಗಿದೆ.

ಈ ಬಗ್ಗೆ ಯಶವಂತಪುರ, ಬಸವನಗುಡಿ ಮತ್ತು ಸೈಬರ್​ ಕೆಂ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದವು.

ಬಂಧನ ಭೀತಿಯಿಂದ ವೆಂಕಟರಮಣ್​, ಹುಟ್ಟೂರು ಆಂಧ್ರಪ್ರದೇಶದಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್​ ಆಯುಕ್ತ ಸಿ.ಎಚ್​. ಪ್ರತಾಪ್​ ರೆಡ್ಡಿ, ಹೆಚ್ಚಿನ ತನಿಖೆ ಸಲುವಾಗಿ ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶದ ಗುತ್ತಿ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.