ಮನೆ ರಾಜ್ಯ ನವೀಕರಿಸಬಹುದಾದ ಇಂಧನ ಉತ್ಪಾದನೆ: ಕರಾವಳಿಯಲ್ಲಿ 2 ಲಕ್ಷ ಕೋಟಿವರೆಗೆ ಬಂಡವಾಳ ಹೂಡಿಕೆ- ಸಿಎಂ ಬೊಮ್ಮಾಯಿ

ನವೀಕರಿಸಬಹುದಾದ ಇಂಧನ ಉತ್ಪಾದನೆ: ಕರಾವಳಿಯಲ್ಲಿ 2 ಲಕ್ಷ ಕೋಟಿವರೆಗೆ ಬಂಡವಾಳ ಹೂಡಿಕೆ- ಸಿಎಂ ಬೊಮ್ಮಾಯಿ

0

ಮಂಗಳೂರು: ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯಾ ಉತ್ಪಾದನೆ ಸೇರಿದಂತೆ ಕರಾವಳಿಯಲ್ಲಿ ₹1.5ಲಕ್ಷ ಕೋಟಿಯಿಂದ ₹ 2 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು.

ಹಸಿರು ಇಂಧನ ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗಿದೆ. ಈಗಾಗಲೇ ಮೂರು ನವೀಕರಿಸಬಹುದಾದ ಇಂಧನ ಕಂಪೆನಿಗಳೊಂದಿಗೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಬಹಳ ವೇಗದಲ್ಲಿ ಕೆಲಸಗಳಾಗುತ್ತಿದ್ದು, ಮಾರ್ಚ್-ಏಪ್ರಿಲ್ ವೇಳೆಗೆ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ಹೇಳಿವೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬರಲಿದ್ದು, ಗಲ್ಫ್ ದೇಶದಲ್ಲಿ ಮತ್ತು ಮಂಗಳೂರಿನಲ್ಲಿ ತಲೆ ಎತ್ತಲಿವೆ. ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರಿಸುವ ಪ್ರಮುಖ ಘಟ್ಟಗಳು ಬರಲಿವೆ. ನವೀಕರಿಸಬಹುದಾದ ಇಂಧನ ಘಟಕಗಳಿಗೆ ಅಗತ್ಯವಿರುವ ಇಂಧನವನ್ನೂ ನವೀಕರಿಸಬಹುದಾದ ಸೌರ ಹಾಗೂ ಗಾಳಿ ಯಂತ್ರಗಳಿಂದಲೇ ಪಡೆಯಲಾಗುವುದು ಎಂದರು.

ನೇರ ಹಾಗೂ ಪರೋಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು ಕರಾವಳಿ ಭಾಗದ ಯುವಕರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.