ಮನೆ ಅಪರಾಧ ಮಂಗಳೂರಿನ ರಿಕ್ಷಾದಲ್ಲಿ ಸ್ಪೋಟ ಪ್ರಕರಣ: ಇದೊಂದು ಭಯೋತ್ಪಾದನಾ ಕೃತ್ಯ- ಪೊಲೀಸರು

ಮಂಗಳೂರಿನ ರಿಕ್ಷಾದಲ್ಲಿ ಸ್ಪೋಟ ಪ್ರಕರಣ: ಇದೊಂದು ಭಯೋತ್ಪಾದನಾ ಕೃತ್ಯ- ಪೊಲೀಸರು

0

ಮಂಗಳೂರು(Mangalore): ನಗರದ ಗರೋಡಿಯಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಶನಿವಾರ ಸಂಜೆ ಸಂಭವಿಸಿದ ಲಘು ಸ್ಫೋಟವು ಆಕಸ್ಮಿಕ ಘಟನೆಯಲ್ಲ. ಇದೊಂದು ಭಯೋತ್ಪಾದನೆ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ ಇದ್ದ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿ ಪ್ರಕರಣಕ್ಕೆ ಸಂಬಂಧಿಸಿದ  ಪ್ರಯಾಣಿಕನ ಹೆಸರನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

ಘಟನೆ ನಡೆದ ಸ್ಥಳಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್‌ ನಿರ್ದೇಶಕ ಅಲೋಕ್‌ ಕುಮಾರ್‌  ತನಿಖಾಧಿಕಾರಿಗಳಿಂದ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕಿದರು.

ಗಾಯಗೊಂಡಿರುವ ರಿಕ್ಷಾ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರನ್ನು ಹಾಗೂ ಆರೋಪಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಫೋಟದಿಂದ ಆರೋಪಿಯ ಮುಖವೂ ಸುಟ್ಟು ಹೋಗಿದೆ. ಆತನಿಗೆ ಶೇ 45ರಷ್ಟು ಸುಟ್ಟಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ ಊದಿಕೊಂಡಿರುವುದರಿಂದ ಆತ ಮಾತನಾಡುತ್ತಿಲ್ಲ. ಆತನನ್ನು ಬಲವಂತಪಡಿಸುವಂತೆಯೂ ಇಲ್ಲ. ಡಿಎನ್‌’ಎ ಪರೀಕ್ಷೆಯಿಂದ ಅಥವಾ ಬಂಧುಗಳಿಂದ ಆರೋಪಿಯ ಗುರುತನನ್ನು ಖಚಿತಪಡಿಸಿಕೊಳ್ಳಬೇಕಿದೆ. ಆರೋಪಿಯ ಬಗ್ಗೆ ಸಿಕ್ಕಿರುವ ಸುಳಿವಿನ ಆಧಾರದಲ್ಲಿ ಬಂಧುಗಳನ್ನು ಕರೆಸುತ್ತಿದ್ದು, ಅವರು ಖಚಿತ ಪಡಿಸಿದ ಬಳಿಕವಷ್ಟೇ ಆರೋಪಿ ಯಾರು ಎಂಬುದನ್ನು ನಿಖರವಾಗಿ ಹೇಳಬಹುದು ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಚಾಲಕ ಪುರುಷೋತ್ತಮ ಪೂಜಾರಿ ಕೆಲ ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷ ದರ್ಶಿಗಳಿಂದಲೂ ಬಹಳಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಆರೋಪಿಯು ರಿಕ್ಷಾ ಹತ್ತಿದ ಬಳಿಕ ಪಂಪ್‌’ವೆಲ್‌’ಗೆ ಹೋಗುವಂತೆ ಹೇಳಿದ್ದ. ಆತನ ಬಗ್ಗೆ ಬಹಳಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಆತನ ಬಂಧುಗಳನ್ನೂ ಕರೆಸಿಕೊಳ್ಳುತ್ತಿದ್ದೇವೆ. ಅವರು ಖಚಿತಪಡಿಸಿದ ಬಳಿಕವಷ್ಟೇ ಆರೋಪಿಯ ಗುರುತನ್ನು ಬಹಿರಂಗಪಡಿಸಬಹುದು ಎಂದು ಎಡಿಜಿಪಿ ತಿಳಿಸಿದರು.

ಆರೋಪಿಗೆ ಯಾರ ಜೊತೆ ಸಂಪರ್ಕ ಇದೆ, ಅವನು ಇಲ್ಲಿಗೆ ಹೇಗೆ ಬಂದ, ಎಲ್ಲಿ ವಾಸ ಇದ್ದ, ಬಾಂಬ್‌ ಎಲ್ಲಿ ತಯಾರಿಸಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇಲ್ಲಿ ಪ್ರಕರಣದ ತನಿಖೆಗೆ ಎಸಿಪಿ ಪರಮೇಶ್ವರ ಹೆಗಡೆ ಅವರನ್ನು ನೇಮಿಸಲಾಗಿದೆ. ಅವರ ನೇತೃತ್ವದ ತಂಡವು ಬಹಳಷ್ಟು ಮಾಹಿತಿ ಕಲೆಹಾಕಿದೆ. ಕೇಂದ್ರೀಯ ತನಿಖಾ ಏಜೆನ್ಸಿಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ ಎಂದರು.

ಆರೋಪಿ ಜೊತೆ ನಂಟು ಇರುವ ಆಧಾರದಲ್ಲಿ ರಾಜ್ಯದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ಅವರ ಪಾತ್ರ ಇದೆಯೇ ಪರಿಶೀಲಿಸುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಸ್ ನಲ್ಲಿ ಬಂದಿದ್ದ ಆರೋಪಿ

ಬಿ.ಸಿ. ರೋಡ್‌ ಕಡೆಯಿಂದ ಬಂದ ಬಸ್‌ನಲ್ಲಿ ಬಂದಿದ್ದ ಆರೋಪಿ, ಕಂಕನಾಡಿಯ ನಾಗುರಿ ಎಂಬಲ್ಲಿ ಇಳಿದಿದ್ದ. ಅಲ್ಲಿಂದ ರಿಕ್ಷಾದಲ್ಲಿ ಪ್ರಯಾಣಿಸಿದ್ದ. ರಿಕ್ಷಾದಲ್ಲಿ ಅರ್ಧ ಕಿ.ಮೀ ದೂರ ಸಾಗುವಷ್ಟರಲ್ಲೇ ಗರೊಡಿ ಬಳಿ ಆತನ ಬಳಿ ಇದ್ದ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿ ಬಳಿ ಪತ್ತೆಯಾದ ಆಧಾರ್‌ ಕಾರ್ಡ್‌ನಿಂದಾಗಿ ಆತನ ಗುರುತಿನ ಬಗ್ಗೆ ಗೊಂದಲ ಉಂಟಾಗಿತ್ತು. ಆರೋಪಿಯು ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದ ಬೇರೆಯವರ ಆಧಾರ್‌ ಕಾರ್ಡ್ ಇಟ್ಟುಕೊಂಡಿರುವ ಸಾಧ್ಯತೆ ಇದೆ’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ಮೈಸೂರಿನಲ್ಲಿ ಮನೆ ಬಾಡಿಗೆಗೆ ಪಡೆದಿದ್ದ

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ಆರೋಪಿಯು ಮೇಟಗಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದನು.

ಆರೋಪಿ ಲೋಕನಾಯಕ‌ ನಗರದ 10ನೇ ಕ್ರಾಸ್‌ನಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದ. ಆ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ. ಆತ ಬಾಡಿಗೆಗಿದ್ದುದ್ದನ್ನು ಮನೆ ಮಾಲೀಕ ಮೋಹನ್‌ಕುಮಾರ್‌ ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ‌ ನೀಡಿದರು.

ಆರೋಪಿಯು ಹುಬ್ಬಳ್ಳಿಯ ಮಾರುತಿ ಪುತ್ರ ಪ್ರೇಮರಾಜ ಎಂದು ವಿಳಾಸ ನೀಡಿದ್ದ ಎಂದು ಗೊತ್ತಾಗಿದೆ. ಕೊಠಡಿಯಲ್ಲಿ ತನಿಖಾ ತಂಡ ಪರಿಶೀಲಿಸಿದಾಗ, ಸರ್ಕಿಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮರದ ಪೌಡರ್, ಅಲ್ಯೂಮಿನಿಯಂ, ಮಲ್ಟಿಮೀಟರ್, ವೈರ್, ಪ್ರೆಷರ್ ಕುಕ್ಕರ್, ಮೊಬೈಲ್ ಫೋನ್, 2 ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಸಿಕ್ಕಿವೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನದಳದಿಂದಲೂ ಪರಿಶೀಲನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಆತ ಅಗ್ರಹಾರದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲ ತಿಂಗಳವರೆಗೆ ಮೊಬೈಲ್ ಫೋನ್ ರಿಪೇರಿ ತರಬೇತಿ ಪಡೆದಿದ್ದ ಎನ್ನಲಾಗಿದ್ದು, ಅಲ್ಲಿಯೂ ಪೊಲೀಸರು ಪರಿಶೀಲನೆ ನಡೆಸಿದರು.

ಮಂಗಳೂರಿನಲ್ಲಿ ಸ್ಫೋಟಿಸಿದ ಕುಕ್ಕರ್ ಬಾಂಬ್ ಅನ್ನು ಮೈಸೂರಿನಿಂದ ಬಸ್‌’ನಲ್ಲಿ ತೆಗೆದುಕೊಂಡು ಹೋಗಲಾಗಿತ್ತು ಎಂದು ತಿಳಿದುಬಂದಿದೆ.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಆರೋಪಿಯ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.