ಮಂಗಳೂರು(Mangalore): ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮೊಹಮದ್ ಶಾರೀಕ್ ಎಂದು ಆತನ ಪೋಷಕರು ಖಚಿತಪಡಿಸಿದ್ದಾರೆ.
ಗೋಡೆ ಬರಹ ಪ್ರಕರಣದಲ್ಲೂ ಆರೋಪಿಯಾಗಿದ್ದ ಶಾರೀಕ್ ಕಂಕನಾಡಿಯ ಗರೋಡಿ ಬಳಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ. ಆರೋಪಿ ಶಾರೀಕ್’ನನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೋಮವಾರ ಬೆಳಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಶಾರೀಕ್ ಆರೋಗ್ಯ ವಿಚಾರಿಸಿದ ಕುಟುಂಬಸ್ಥರು, ಆತನೇ ಶಾರೀಕ್ ಎಂದು ಪೊಲೀಸರ ಸಮ್ಮುಖದಲ್ಲಿ ಖಚಿತಪಡಿಸಿದ್ದಾರೆ.
ಶಾರೀಕ್ ನಿವಾಸದ ಮೇಲೆ ಪೊಲೀಸರ ದಾಳಿ
ಇದಕ್ಕೂ ಮುನ್ನ ತೀರ್ಥಹಳ್ಳಿಯ ಶಾರೀಕ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ತೀರ್ಥಹಳ್ಳಿ ಪಟ್ಟಣದ ಟಾಕೀಸ್ ರಸ್ತೆಯಲ್ಲಿರುವ ನಾಲ್ಕು ಮನೆಗಳ ಮೇಲೆ ಪೊಲೀಸರು ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದು, ಒಂದು ಗಂಟೆಯ ಶೋಧದ ಬಳಿಕ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಶಾರೀಕ್, ಮಾಜ್ ಸಂಬಂಧಿಗಳ ಮನೆ ಮೇಲೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.
ತೀರ್ಥಹಳ್ಳಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ, ಮಾಳೂರು ಸರ್ಕಲ್ ಇನ್ಸ್ಪೆಕ್ಟರ್ ಪ್ರವೀಣ್ ನಿಲ್ಲಮ್ಮನವರ್, ಆಗುಂಬೆ ಪಿಎಸ್ಐ ಶಿವಕುಮಾರ್ ಹಾಗೂ ಮಾಳೂರು ಪಿಎಸ್’ಐ ನವೀನ್ ಮಠಪತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.