ಮನೆ ಸುದ್ದಿ ಜಾಲ ಮೈಸೂರು: ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ- ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ- ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ

0

ಮೈಸೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ತುಂಡುಗುತ್ತಿಗೆ ಕಾಮಗಾರಿ ನೀಡುವಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ವೀರ ಕೇಸರಿ ಪಡೆ  ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾ ಪಂಚಾಯತ್ ಎದುರು ಇಂದು ಜಮಾವಣೆಗೊಂಡ ಕರ್ನಾಟಕ ವೀರ ಕೇಸರಿ ಪಡೆ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಪಂಚಾಯತ್‌ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಸಂಸದರ ನಿಧಿ, ಜಿಲ್ಲಾ ಪಂಚಾಯತ್‌ನ ವಿವಿಧ ಲೆಕ್ಕಶಿರ್ಷಿಕೆ, ತಾಲ್ಲೂಕು ಪಂಚಾಯತ್‌ನ ವಿವಿಧ ಲೆಕ್ಕ ಶೀರ್ಷಿಕೆಯಡಿಯಲ್ಲಿನ ತುಂಡುಗುತ್ತಿಗೆ ನೀಡುವಲ್ಲಿ ಅಧಿಕಾರಿಗಳು ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ ತಮಗಿಷ್ಟ ಬಂದ ಗುತ್ತಿಗೆದಾರರಿಗೆ ತುಂಡುಗುತ್ತಿಗೆ ಕಾಮಗಾರಿ ನೀಡಿ ವ್ಯಾಪಕ ಅಕ್ರಮವೆಸಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸರ್ಕಾರಿ ನಿಯಮದ ಪ್ರಕಾರ ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ತುಂಡುಗುತ್ತಿಗೆ ಕಾಮಗಾರಿ ಕೋರಿ ಅರ್ಜಿ ಸಲ್ಲಿಸಿರುವ ಗುತ್ತಿಗೆದಾರರಿಗೆ ಜೇಷ್ಠತೆಯನ್ವಯ ತುಂಡುಗುತ್ತಿಗೆ ಕಾಮಗಾರಿ ನೀಡಬೇಕು. ಹಾಗೂ ಗುತ್ತಿಗೆದಾರರು ಅರ್ಜಿ ನೀಡಿರುವ ವಿವರವನ್ನು ಸ್ವೀಕೃತಿ ವಹಿ ಪುಸ್ತಕದಲ್ಲಿ ನಮೂದು ಮಾಡಬೇಕು. ಆದರೆ ಅಧಿಕಾರಿಗಳು ಹಾಗೇ ಮಾಡದೆ ಅರ್ಜಿಯೇ ಸಲ್ಲಿಸದ ಗುತ್ತಿಗೆದಾರರಿಗೆ ಅತಿ ಹೆಚ್ಚು ಕಾಮಗಾರಿ ನೀಡಿ, ಅರ್ಜಿ ಸಲ್ಲಿಸಿದ ಗುತ್ತಿಗೆದಾರರಿಗೆ ತುಂಡುಗುತ್ತಿಗೆ ಕಾಮಗಾರಿ ನೀಡುತ್ತಿಲ್ಲ. ಇದರಿಂದಾಗಿ ಅರ್ಜಿ ಸಲ್ಲಿಸಿರುವ ಗುತ್ತಿಗೆದಾರರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು‌ ಆರೋಪಿಸಿದ್ದಾರೆ.