ಮನೆ ರಾಜಕೀಯ ನವೆಂಬರ್ ನಲ್ಲಿ ಜಾತಿಗಣತಿ ವರದಿ ನನ್ನ ಕೈ ಸೇರಬಹುದು: ಸಿಎಂ ಸಿದ್ದರಾಮಯ್ಯ

ನವೆಂಬರ್ ನಲ್ಲಿ ಜಾತಿಗಣತಿ ವರದಿ ನನ್ನ ಕೈ ಸೇರಬಹುದು: ಸಿಎಂ ಸಿದ್ದರಾಮಯ್ಯ

0


ಮೈಸೂರು: ಕಾಂತರಾಜು ಅಧ್ಯಕ್ಷರಾಗಿದ್ದಾಗ ಕುಮಾರಸ್ವಾಮಿ ಅವರಿಗೆ ವರದಿ ನೀಡಲಾಗಿತ್ತು. ಆದರೆ ಅವರು ಸ್ವೀಕರಿಸಿಲ್ಲ. ಹೀಗಾಗಿ ಹೊಸ ಅಧ್ಯಕ್ಷರಿಗೆ ಕಾಂತರಾಜು ವರದಿ ನೀಡಲು ಸೂಚಿಸಿದ್ದು, ನವೆಂಬರ್ ತಿಂಗಳಲ್ಲಿ ವರದಿ ನನ್ನ ಕೈ ಸೇರಬಹುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಮಂಡಕಳ್ಳಿ ಏರ್​ ಪೋರ್ಟ್​ ನಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಲಭ್ಯವಾದ ಬಳಿಕ ಪರಿಶೀಲಿಸಿ ತೀರ್ಮಾನ ಮಾಡಲಾಗುವುದು. ಸಮಿತಿ ಅಧ್ಯಕ್ಷರು ಬದಲಾಗಿದ್ದಾರೆ. ಕಾಂತರಾಜು ಅಧ್ಯಕ್ಷರಾಗಿದ್ದಾಗ ಕುಮಾರಸ್ವಾಮಿ ವರದಿ ನೀಡಿದ್ದರು. ಆದರೆ ಕುಮಾರಸ್ವಾಮಿ ಜಾತಿ ಗಣತಿ ವರದಿ ಸ್ವೀಕರಿಸಲಿಲ್ಲ ಎಂದರು.

ಹೊಸ ಅಧ್ಯಕ್ಷರಿಗೆ ಕಾಂತರಾಜು ವರದಿ ನೀಡಲು ಸೂಚಿಸಿದ್ದೇನೆ. ಹೀಗಾಗಿ ಅವರು ನವೆಂಬರ್​ ನಲ್ಲಿ ಜಾತಿ ಗಣತಿ ವರದಿ ಕೊಡುತ್ತಾರೆ. ಜಾತಿ ಗಣತಿ ಸಮಾಜಕ್ಕೆ ಮಾರಕವಲ್ಲ, ಅದು ಸಮಾಜವನ್ನು ವಿಭಜಿಸುವುದಿಲ್ಲ. ಯಾವ ಸಮುದಾಯ ಎಷ್ಟಿದೆ ಎಂಬುದು ಅಂಕಿ ಅಂಶಗಳು ಸರ್ಕಾರಕ್ಕೆ ಬೇಕು. ಯೋಜನೆಗಳನ್ನು ಸಿದ್ದಪಡಿಸಲು ಈ ಯೋಜನೆಗಳು ಅವಶ್ಯಕ. ಆರ್ಥಿಕಾವಾಗಿ ಹಿಂದುಳಿದವರಿಗೆ ಅಭಿವೃದ್ಧಿ ಮಾಡಲು ಜನಗಣತಿ ಅವಶ್ಯಕವಾಗಲಿದೆ ಎಂದರು.

ಹಲವು ಜಿಲ್ಲೆಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಖುದ್ದು ಭೇಟಿ ಮಾಡಿ ಸಮಸ್ಯೆ ಆಲಿಸಿ ಅಂತಾ ಕೇಂದ್ರದ ಅಧಿಕಾರಿಗಳಿಗೆ ನಾನು ಕೇಳಿಕೊಂಡಿದ್ದೇನೆ. ಬರ ಪ್ರವಾಸದ ಬಗ್ಗೆ ಕೇಂದ್ರ ಅಧಿಕಾರಿಗಳೇ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆ ಕಡೆ ಬನ್ನಿ, ಈ ಕಡೆ ಬನ್ನಿ ಅಂತಾ ನಾನು ನಿರ್ದೇಶನ ಮಾಡಲು ಆಗಲ್ಲ ಎಂದರು.

ಕೇಂದ್ರದ ಬಳಿ 4,500 ಕೋಟಿ ರೂ. ಬರ ಪರಿಹಾರ ಕೇಳಿದ್ದೇವೆ. ಕೇಂದ್ರ ತಂಡದ ವರದಿ ಆಧರಿಸಿ ಪರಿಹಾರ ಬಗ್ಗೆ ತೀರ್ಮಾನ ಆಗುತ್ತದೆ. ಬರಕ್ಕೂ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಯಾವ ಸಂಬಂಧ ಇಲ್ಲ. ಬರದ ಪರಿಸ್ಥಿತಿ ಇದ್ದರೂ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತದೆ ಎಂದರು.

ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಹೊಸ ಬಾರ್​ ಲೈಸೆನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಡಿ.ಕೆ.ಶಿವಕುಮಾರ್ ಎಲ್ಲೂ ಹೊಸ ಲೈಸೆನ್ಸ್ ಕೊಡುತ್ತೇವೆ ಎಂದು ಹೇಳಿಲ್ಲ. ಹೊಸ ಬಾರ್​ ಓಪನ್​​ಗೆ ಲೈಸೆನ್ಸ್​ ಕೊಡುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಸದ್ಯಕ್ಕೆ ಈ ವಿಚಾರ ಬಗ್ಗೆ ಚರ್ಚೆ ಆಗೋದು ಬೇಡ ಎಂದರು.

ಹಿಂದಿನ ಲೇಖನಕೇಂದ್ರ ಲೋಕಸೇವಾ ಆಯೋಗದ 56 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಸಿದ್ದರಾಮಯ್ಯ ಅವರು ಬಸವತತ್ವದ ಅಪ್ಪಟ ಅನುಯಾಯಿ. ಸರ್ವರನ್ನೂ ಜತೆಯಾಗಿ ಕೊಂಡೊಯ್ಯುತ್ತಿದ್ದಾರೆ: ಈಶ್ವರ ಖಂಡ್ರೆ