ಚಾಮರಾಜನಗರ: ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣ ನಡೆದಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಭಯೋತ್ಪಾದಕರು, ಕಿಡಿಗೇಡಿಗಳ ಬಗ್ಗೆ ಎಲ್ಲವೂ ಗೊತ್ತಿದೆ. ಆದರೆ, ರಾಜ್ಯದಲ್ಲಿ ಅದು ನಿದ್ದೆ ಮಾಡುತ್ತಿದೆ. ಒಂದು ಕಡೆ ಸರ್ಕಾರದ ನಿರ್ಲಕ್ಷ್ಯ, ಮತ್ತೊಂದು ಕಡೆ ಕಾಂಗ್ರೆಸ್’ನ ಮುಸ್ಲಿಮರ ತುಷ್ಟೀಕರಣವೇ ಭಯೋತ್ಪಾದನೆಗೆ ಮೂಲ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು.
ಪೊಲೀಸರು ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಂಗಳೂರು ಪ್ರಕರಣದ ಶಾರಿಕ್ ವಿರುದ್ಧ ಈ ಹಿಂದೆಯೇ ಪ್ರಕರಣ ದಾಖಲಾಗಿ ಬಂಧನವಾಗಿತ್ತು. ಆತ ಜೈಲಿನಿಂದ ಬಿಡುಗಡೆಯಾದ ಮೇಲೆ ಪೊಲೀಸರು ಆತನ ಚಲನವಲನಗಳ ಮೇಲೆ ಕಣ್ಣಿಡಬೇಕಿತ್ತು ಎಂದರು.
ಮೈಸೂರು ಅಥವಾ ಕರಾವಳಿಯಲ್ಲಿ ಎನ್’ಐಎ ಘಟಕ ತೆರೆಯಬೇಕು. ಪಿಎಫ್’ಐ ಬ್ಯಾನ್ ಮಾಡಿರಬಹುದು. ಆದರೆ ಅಂತಹ ಮನಃಸ್ಥಿತಿಯ ಸಾವಿರಾರು ಜನರು ಇದ್ದಾರೆ. ಅವರನ್ನೆಲ್ಲ ಹದ್ದುಬಸ್ತಿನಲ್ಲಿಡುವ ಕೆಲಸ ಆಗಬೇಕು ಎಂದರು.
ಮೈಸೂರು 2007ರಿಂದಲೇ ಉಗ್ರರ ಸ್ಲೀಪರ್ ಸೆಲ್ ಆಗಿದೆ. ಮೈಸೂರು ಪಿಎಫ್’ಐನ ಪ್ರಯೋಗಶಾಲೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಮುತಾಲಿಕ್ ಉತ್ತರಿಸಿದರು.
ಬಿಜೆಪಿಯವರು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ 200ಕ್ಕೂ ಹೆಚ್ಚು ಜನರ ಮೇಲಿದ್ದ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡಿತ್ತು. ಬಿಜೆಪಿ ಸರ್ಕಾರ ಯಾಕೆ ಮತ್ತೆ ಪ್ರಕರಣಗಳನ್ನು ದಾಖಲಿಸಲಿಲ್ಲ? ಸರ್ಕಾರ ಆ ಎಲ್ಲ ಪ್ರಕರಣಗಳಿಗೆ ಮರುಜೀವ ನೀಡಿ ಅವರನ್ನೆಲ್ಲ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ದೇವಾಲಯಗಳಲ್ಲಿ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ಮಾಡಬೇಕು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯಾಪಾರ ಮಾಡಲು ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಅಳವಡಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ಇದಕ್ಕೆ ನನ್ಮ ಸಂಪೂರ್ಣ ಬೆಂಬಲ ಇದೆ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ಮಾಡಬೇಕು. ಹಿಂದೂ ದೇವಾಲಯಗಳ 100 ಮೀಟರ್ ಅಂತರದಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂದು ಮುಜರಾಯಿ ಇಲಾಖೆಯ ಕಾನೂನು ಇದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಮುತಾಲಿಕ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಹಿಂದೂಗಳಿಗಾಗಿ ನಾನು ರಾಜಕೀಯ ಪ್ರವೇಶ ಮಾಡುತ್ತೇನೆ. ಶ್ರೀರಾಮಸೇನೆ ರಾಜಕೀಯ ಪಕ್ಷವಲ್ಲ; ಸಂಘಟನೆ. ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಇನ್ನೂ ನಿರ್ಧಾರ ಮಾಡಿಲ್ಲ. ನನ್ನ ಜೊತೆ ಇನ್ನೂ 25 ಮಂದಿ ಪ್ರಖರ ಹಿಂದುತ್ವವಾದಿಗಳು ಸ್ಪರ್ಧಿಸಲಿದ್ದಾರೆ. ವಿಧಾನಸಭೆಯಲ್ಲಿ ಹಿಂದೂಗಳ ಪರ ಧ್ವನಿಯಾಗಬೇಕು, ಹಿಂದೂಗಳ ರಕ್ಷಣೆಯಾಗಬೇಕು ಎಂಬುದೇ ನಮ್ಮ ಉದ್ದೇಶ ಎಂದರು.