ಮನೆ ಸುದ್ದಿ ಜಾಲ ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ ವಿರುದ್ಧ ಐಟಿ, ಇಡಿಗೆ ದೂರು: ಕಾಡಾ ಅಧ್ಯಕ್ಷ ಜಿ ನಿಜಗುಣರಾಜು

ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ ವಿರುದ್ಧ ಐಟಿ, ಇಡಿಗೆ ದೂರು: ಕಾಡಾ ಅಧ್ಯಕ್ಷ ಜಿ ನಿಜಗುಣರಾಜು

0

ಚಾಮರಾಜನಗರ: ಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ ಕಳೆದ 15 ವರ್ಷದಿಂದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ಕೋಟ್ಯಾಂತರ ರೂ. ಸಂಪಾದನೆ ಮಾಡಿದ್ದು, ಅವರ ವಿರುದ್ದ ಐಟಿ ಹಾಗೂ ಇಡಿಗೆ ದೂರು ನೀಡುತ್ತೇವೆ ಎಂದು ಕಾಡಾ ಅಧ್ಯಕ್ಷ ಜಿ ನಿಜಗುಣರಾಜು ಅವರು ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಕ್ಷೇತ್ರದ ಜನರು ತಮ್ಮ ಸೇವೆ ಮಾಡಲಿ ಎಂದು ಮತ ನೀಡಿದ್ದರೆ, ಅದನ್ನು ದುರ್ಬಳಕೆ ಮಾಡಿಕೊಂಡು ಸ್ವಾರ್ಥಕ್ಕಾಗಿ ಅಕ್ರಮವಾಗಿ ಹಣ ಮಾಡಿದ್ದಾರೆ ಎಂದು ಆರೋಪಿಸಿದರು.

ಶಾಸಕರು ತಾವೇ ಹೇಳಿಕೊಂಡಂತೆ 42 ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರು ಸರಿಯಾಗಿ ಆದಾಯ ಮತ್ತು ತೆರಿಗೆ ಇಲಾಖೆಗಳಿಗೆ ಮಾಹಿತಿ ನೀಡದೇ ವಂಚಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರು ಕ್ಷೇತ್ರದ ಜನರಿಗೆ ಶ್ವೇತ ಪತ್ರವನ್ನು ಹೊರಡಿಸಲಿ. ಅವರು ಮಾಡಿರುವ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಯರಂಗಬಳ್ಳಿ ಬಳಿ ಕ್ವಾರಿ, ಗುಂಬಳ್ಳಿ ಬಳಿ ಕ್ವಾರಿ, ಶಂಕರಪುರದಲ್ಲಿ 20 ಗುಂಟೆ ಜಮೀನು, ನ್ಯಾಯಾಲಯ ರಸ್ತೆಯಲ್ಲಿ ಮನೆ, ಉಪ್ಪಿನ ಮೋಳೆ ಬಳಿ ಪೆಟ್ರೋಲ್ ಬಂಕ್ ಸೇರಿದಂತೆ ಇನ್ನು ಅನೇಕ ಕಡೆ ಆಸ್ತಿ ಪಾಸ್ತಿಗಳು ಪತ್ನಿ, ಮಕ್ಕಳ ಹೆಸರಿನಲ್ಲಿ ಮಾಡಿದ್ದು, ಇವೆಲ್ಲವೂ ಸಹ ಸಮಗ್ರ ತನಿಖೆಯಾಗಬೇಕು ಎಂದು ನಿಜಗುಣರಾಜು ಒತ್ತಾಯಿಸಿದರು.

ಬಿಜೆಪಿಯಿಂದ ಶಾಸಕರ ವಿರುದ್ದ ಪತ್ರ ಚಳವಳಿ ಮಾಡಲಿದ್ದು, ಅಕ್ರಮ ಆಸ್ತಿ ಸಂಬಂಧ ಆದಾಯ ಮತ್ತು ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೆ ದೂರು ಕೊಡುವುದಾಗಿ ತಿಳಿಸಿದರು.

ಕೆಲವು ದಿನಗಳ ಹಿಂದೆಯಷ್ಟೇ ಶಾಸಕರ ವಿರುದ್ಧ ಉದ್ಯಮಿ 9 ಕೋಟಿ ರೂ. ವಂಚನೆ ಆರೋಪ ಮಾಡಿದ್ದರು. ಈ ಆರೋಪವನ್ನು ಶಾಸಕರು ಅಲ್ಲಗಳೆದಿದ್ದರು. ಜೊತೆಗೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು.