ಮನೆ ಪ್ರವಾಸ ಭಾರತದ 5 ಪಾರಂಪರಿಕ ಗ್ರಾಮಗಳಿಗೆ ನೀವು ಒಮ್ಮೆ ಭೇಟಿ ನೀಡಿ

ಭಾರತದ 5 ಪಾರಂಪರಿಕ ಗ್ರಾಮಗಳಿಗೆ ನೀವು ಒಮ್ಮೆ ಭೇಟಿ ನೀಡಿ

0

ನಮ್ಮ ಭಾರತ ದೇಶದಲ್ಲಿ ಅಸಂಖ್ಯಾತ ಗ್ರಾಮಗಳನ್ನು ನೀವು ನೋಡಬಹುದು. ಅವುಗಳಲ್ಲಿ ವಿಶೇಷವಾಗಿ ಪಾರಂಪರಿಕ ಗ್ರಾಮಗಳು ಎಂದು ಕರೆಸಿಕೊಳ್ಳುವ ಗ್ರಾಮಗಳು ಕೂಡ ಇವೆ. ಮುಖ್ಯವಾಗಿ ಪಾರಂಪರಿಕ ಗ್ರಾಮವೆಂದರೆ ಹಳೆಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ವಿಭಿನ್ನ ಜೀವನಶೈಲಿಯನ್ನು ಸಂರಕ್ಷಿಸಿಕೊಂಡು ಬರುತ್ತಿರುವ ಗ್ರಾಮವೇ ಆಗಿದೆ.

ಒಟ್ಟಾರೆ ಈ ಪಾರಂಪರಿಕ ಗ್ರಾಮಗಳ ಪ್ರಮುಖ ಉದ್ದೇಶ ಹಳೆಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂರಕ್ಷಿಸುವುದೇ ಆಗಿದೆ. ಇಂತಹ ಸೊಗಸಾದ ಗ್ರಾಮಗಳನ್ನು ಪ್ರವಾಸೋದ್ಯಮದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಪ್ರಗ್ಪುರ್, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಂತಹ ಅದ್ಭುತವಾದ ರಾಜ್ಯದಲ್ಲಿ ಒಂದು ಸೊಗಸಾದ ಪಾರಂಪರಿಕ ಗ್ರಾಮವಿದೆ. ಇದು ಭಾರತದ ಮೊದಲ ಪಾರಂಪರಿಕ ಗ್ರಾಮವು ಹೌದು. ಪ್ರಗ್ಪುರ್, ಕಾಂಗ್ರಾ ಜಿಲ್ಲೆಯ ಜಸ್ವಾನ್ ರಾಜಮನೆತನದ ರಾಜಕುಮಾರಿ ಪ್ರಾಗ್ ದೇಯಿ ಸ್ಮರಣೆಗಾಗಿ ಈ ಗ್ರಾಮವನ್ನು ಸ್ಥಾಪಿಸಲಾಯಿತು. ಇದು ಸುಮಾರು 16 ನೇ ಶತಮಾನಕ್ಕೆ ಸೇರಿದೆ.

ಗ್ರಾಮದ ಪ್ರವಾಸವನ್ನು ನೀವು ಇಷ್ಟಪಡುವವರಾಗಿದ್ದರೆ ಖಂಡಿತವಾಗಿಯೂ ಹಿಮಾಚಲದ ಈ ಪ್ರಗ್ಪುರ್ ಗ್ರಾಮ ನಿಮಗೆ ಇಷ್ಟವಾಗುತ್ತದೆ. ಇಲ್ಲಿ ಕೋಟೆ ಮತ್ತು ವಿಲ್ಲಾಗಳಂತಹ ಮನೆಗಳನ್ನು ನೀವು ನೋಡಬಹುದು.

ಗಾರ್ಲಿ, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಮತ್ತೊಂದು ಪಾರಂಪರಿಕ ಗ್ರಾಮವೆಂದರೆ ಅದು ಗಾರ್ಲಿ. ಇದು ತನ್ನ ಅದ್ಭುತವಾದ ವಾಸ್ತುಶಿಲ್ಪ ಶೈಲಿಯಿಂದ ಗಮನಾರ್ಹವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಹಳೆಯ ಹವೇಲಿಗಳನ್ನು ಇಲ್ಲಿ ನೋಡಬಹುದು. ಇಲ್ಲಿನ ಕಟ್ಟಡಗಳು ಯುರೋಪಿಯನ್ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಪ್ರಾಚೀನ ಪರಂಪರೆಯಲ್ಲಿ ನಿಮಗೆ ಆಸಕ್ತಿ ಇದ್ದರೆ ತಪ್ಪದೇ ಈ ಗಾರ್ಲಿ ಗ್ರಾಮಕ್ಕೆ ಒಮ್ಮೆ ಭೇಟಿ ಕೊಡಿ.

ಕಿಸಾಮಾ, ನಾಗಾಲ್ಯಾಂಡ್

ನಾಗಾಲ್ಯಾಂಡ್ನ ಕಿಸಾಮಾ ಮಾದರಿ ಗ್ರಾಮವು ಹಾರ್ನ್ಬಿಲ್ ಉತ್ಸವದ ಸ್ಥಳವಾಗಿದೆ. ಹಾರ್ನ್ಬಿಲ್ ಉತ್ಸವವು ನಾಗಾಲ್ಯಾಂಡ್ ಜನರ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದಲ್ಲಿ ಪಾಲ್ಗೊಳ್ಳಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೆ, ವಿದೇಶಗಳಿಂದಲೂ ಸಂದರ್ಶಕರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಇನ್ನು ಈ ಸಾಂಪ್ರದಾಯಿಕ ನಾಗಾ ಗ್ರಾಮ ಹೇಗಿರುತ್ತದೆ ಎಂಬುದನ್ನು ನೀವು ನೋಡಬಹುದು. ಇದು ಕೊಹಿಮಾದಿಂದ ಕೇವಲ 12 ದೂರದಲ್ಲಿದೆ.

ರೀಕ್, ಮಿಜೋರಾಂ

ಪ್ರವಾಸಿಗರಿಂದ ಕಡಿಮೆ ಅನ್ವೇಷಣೆಗೆ ಒಳಪಡುವ ರಾಜ್ಯಗಳಲ್ಲಿ ಮಿಜೋರಾಂ ಕೂಡ ಒಂದು. ಇಲ್ಲೂ ಕೂಡ ಒಂದು ಸುಂದರವಾದ ಪಾರಂಪರಿಕ ಗ್ರಾಮವಿದೆ. ಅದನ್ನು ಸರೀಕ್ ಟ್ಲಾಂಗ್ ಹೆರಿಟೇಜ್ ವಿಲೇಜ್ ಎಂದೇ ಕರೆಯುತ್ತಾರೆ. ಇಲ್ಲಿ ಸಾಂಪ್ರದಾಯಿಕ ಮಿಜೋ ಗುಡಿಸಲುಗಳು ಮತ್ತು ಸ್ಥಳೀಯ ಜೀವನ ವಿಧಾನವನ್ನು ಪ್ರವಾಸಿಗರು ಅನುಭವಿಸಬಹುದು. ಅರಣ್ಯ ಚಾರಣ ಮಾಡಲು ಮತ್ತು ಹೈಕಿಂಗ್ನಂತಹ ಸಾಹಸ ಕ್ರೀಡೆಗಳು ಎಲ್ಲಿಲ್ಲದೆ ಆನಂದಿಸಬಹುದು.

ಖಾಸಿ ಹೆರಿಟೇಜ್ ವಿಲೇಜ್, ಮೇಘಾಲಯ

ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಿಂದ ಕೇವಲ 25 ಕಿ.ಮೀ ದೂರದಲ್ಲಿ ಖಾಸಿ ಹೆರಿಟೇಜ್ ವಿಲೇಜ್ ಇದೆ. ಇದು ಮಾವ್ಪ್ಲಾಂಗ್ನ ಪವಿತ್ರ ಅರಣ್ಯದ ಸಮೀಪದಲ್ಲಿದೆ. ಮುಖ್ಯವಾಗಿ ಈ ಗ್ರಾಮದಲ್ಲಿ ಮೇಘಾಲಯದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಖಾಸಿ ಜನರ ಸಾಂಪ್ರದಾಯಿಕ ಬದುಕು, ಜೀವನಶೈಲಿ, ಹಬ್ಬಗಳನ್ನು ಪ್ರದರ್ಶಿಸಲು ಈ ಗ್ರಾಮವನ್ನು ರಚಿಸಲಾಗಿದೆ.

ಹಿಂದಿನ ಲೇಖನಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನ
ಮುಂದಿನ ಲೇಖನಕಾಂಗ್ರೆಸ್ ಶಾಸಕ ಸಿ ಪುಟ್ಟರಂಗಶೆಟ್ಟಿ ವಿರುದ್ಧ ಐಟಿ, ಇಡಿಗೆ ದೂರು: ಕಾಡಾ ಅಧ್ಯಕ್ಷ ಜಿ ನಿಜಗುಣರಾಜು