ಮನೆ ರಾಷ್ಟ್ರೀಯ ನಾಳೆಯಿಂದಲೇ‌ ಆರ್’ಬಿಐ ನಿಂದ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಆರಂಭ

ನಾಳೆಯಿಂದಲೇ‌ ಆರ್’ಬಿಐ ನಿಂದ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಆರಂಭ

0

ನವದೆಹಲಿ: ಆರ್‌’ಬಿಐ ಡಿಜಿಟಲ್ ರೂಪಾಯಿಯನ್ನು ಡಿಸೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭ ಮಾಡಲಿದ್ದು, ಹಣಕಾಸು ವಹಿವಾಟಿನಲ್ಲಿ ಹೊಸ ಮುನ್ನುಡಿ ಬರೆಯಲು ಸಜ್ಜಾಗಿದೆ.

ಈ ಪ್ರಾಯೋಗಿಕ ಯೋಜನೆ ಮೊದಲು ಕೆಲವು ಪ್ರದೇಶಗಳಲ್ಲಿ ಮಾತ್ರ ಆರಂಭ ಮಾಡಲಾಗುತ್ತದೆ. ಹಂತ ಹಂತವಾಗಿ ಪ್ರಯೋಗವನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಆರ್’ಬಿಐ ಮಾಹಿತಿ ನೀಡಿದೆ.

ಡಿಜಿಟಲ್ ರೂಪಾಯಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಕೇಂದ್ರ ಬಜೆಟ್‌’ನಲ್ಲಿ ಘೋಷಣೆ ಮಾಡಿದ್ದರು.

ಡಿಜಿಟಲ್‌ ರೂಪಾಯಿ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಯೆಸ್‌ ಬ್ಯಾಂಕ್, ಐಡಿಎಫ್‌’ಸಿ ಬ್ಯಾಂಕ್‌ ಮೂಲಕ ಪ್ರಮುಖ ನಾಲ್ಕು ನಗರಗಳಲ್ಲಿ ಪ್ರಾಯೋಗಿಕ ಬಳಕೆ ಮಾಡಲಾಗುತ್ತದೆ. ಉಳಿದ ಬ್ಯಾಂಕ್’ಗಳಲ್ಲಿ ಹಂತ ಹಂತವಾಗಿ ಪ್ರಾರಂಭವಾಗಲಿದೆ.

ಮೊದಲು ಡಿಜಿಟಲ್ ರೂಪಾಯಿ ಪ್ರಾಯೋಗಿಕವಾಗಿ ನವದೆಹಲಿ, ಬೆಂಗಳೂರು, ಮುಂಬೈ, ಭುವನೇಶ್ವರದಲ್ಲಿ ಆರಂಭ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಅಹಮದಾಬಾದ್, ಗುವಾಹಟಿ, ಹೈದಾರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ, ಶಿಮ್ಲಾದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ ಮಾಡಲಾಗುತ್ತದೆ.

ಇದರ ಬಳಕೆ ಹೇಗೆ?

ಡಿಜಿಟಲ್ ರೂಪಾಯಿ ಡಿಜಿಟಲ್ ವ್ಯಾಲೆಟ್ ರೂಪದಲ್ಲಿರುತ್ತದೆ. ಇದು ಬ್ಯಾಂಕ್‌’ಗಳು ನೀಡುವ ಪೇಪರ್ ಕರೆನ್ಸಿಯ ಡಿಜಿಟಲ್ ರೂಪಾಂತರವಾಗಿದೆ. ಸರಳವಾಗಿ ಹೇಳುವುದಾದರೆ ಇದು ಹಣದ ಎಲೆಕ್ಟ್ರಾನಿಕ್ ರೂಪವಾಗಿದೆ. ಬ್ಯಾಂಕ್‌’ಗಳು ನೀಡುವ ಡಿಜಿಟಲ್ ವ್ಯಾಲೆಟ್‌’ನಲ್ಲಿರುವ ಈ ಡಿಜಿಟಲ್ ರೂಪಾಯಿಯನ್ನು ಗ್ರಾಹಕರು ಮೊಬೈಲ್‌ ಫೋನ್‌’ಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ವ್ಯಕ್ತಿಯಿಂದ-ವ್ಯಾಪಾರಿಗೆ ಕ್ಯೂ ಆರ್ ಕೋಡ್ ಬಳಸಿ ಕಳುಹಿಸಬಹುದು.

ಕಾಗದದ ಕರೆನ್ಸಿಯಂತೆಯೇ, ಡಿಜಿಟಲ್ ರೂಪಾಯಿಯನ್ನು ಬ್ಯಾಂಕ್‌’ಗಳ ಮೂಲಕ ವಿತರಿಸಲಾಗುತ್ತದೆ. ಬಳಕೆದಾರರು ಭಾಗವಹಿಸುವ ಬ್ಯಾಂಕ್ ಮೂಲಕ ಡಿಜಿಟಲ್ ವ್ಯಾಲೆಟ್ ಅನ್ನು ಬಳಸಬೇಕು ಮತ್ತು ಅದನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಸ್ಟೋರ್ ಮಾಡಬೇಕು. ವ್ಯಾಪಾರಿ ಸ್ಥಳಗಳಲ್ಲಿ QR ಕೋಡ್‌ಗಳನ್ನು ಬಳಸಿಕೊಂಡು ವ್ಯಾಪಾರಿಗಳಿಗೆ ಪಾವತಿಗಳನ್ನು ಮಾಡಬಹುದು.