ಮನೆ ಸುದ್ದಿ ಜಾಲ ಗಡಿ ವಿವಾದ: ಮಹಾರಾಷ್ಟ್ರ ಸಿಎಂ ಹೇಳಿಕೆ ವಿರೋಧಿಸಿ ಪ್ರತಿಭಟನೆ

ಗಡಿ ವಿವಾದ: ಮಹಾರಾಷ್ಟ್ರ ಸಿಎಂ ಹೇಳಿಕೆ ವಿರೋಧಿಸಿ ಪ್ರತಿಭಟನೆ

0

ಮೈಸೂರು: ಕರ್ನಾಟಕದ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಈ ದೇಶದ ಒಕ್ಕೂಟದ ವ್ಯವಸ್ಥೆಗೆ ಅಗೌರವವನ್ನು ತೋರುತ್ತಿರುವ ಇವರ ಹೇಳಿಕೆ ಅತ್ಯಂತ ಖಂಡನೀಯ. ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರೂ ಸಹ, ಮಾನ್ಯ ಪ್ರಧಾನಿಗಳು ಕೇಂದ್ರ ಸರ್ಕಾರ ಹಾಗೂ ನಮ್ಮ ರಾಜ್ಯದ ಸಂಸದರು ಮೌನ ವಹಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಜತೆಗೆ ಮತ್ತೆ ಮೊನ್ನೆ ಬೆಳಗಾವಿ ಗಡಿ ಭಾಗದಲ್ಲಿ, ಎಂ.ಇ.ಎಸ್ ಪುಂಡರು, ಕರ್ನಾಟಕದ ಬಸ್ ಗಳ ಮೇಲೆ ಕಲ್ಲು ತೂರಿ, ವಾಹನಗಳ ಮೇಲೆ ಮಸಿ ಬಳಿದು, ಬಸ್ ಗಳ ಮೇಲೆ ಮರಾಠಿ ಅಕ್ಷರಗಳನ್ನು ಬರೆದಿರುವುದು, ಶಾಂತಿ ಸ್ವಭಾವದ ಶಾಂತಿಧೂತರಾದ ಕನ್ನಡಿಗರನ್ನು ತೀವ್ರವಾಗಿ ಕೇರಳಿಸಿದೆ ಹಾಗೂ ಕನ್ನಡಿಗ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಘಟನೆಗಳಿಂದ ಎರಡು ರಾಜ್ಯಗಳ ನಡುವೆ ಸಾಮರಸ್ಯ ಕೆಡುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಗಡಿ ವಿಚಾರ ಮುಗಿದ ಅಧ್ಯಾಯವಾಗಿದೆ. ಮಹಾರಾಷ್ಟ್ರ ಸರ್ಕಾರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಗಡಿ ವಿವಾದವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಸರ್ಕಾರ, ಇದೇ ರೀತಿ ಉದ್ದಟತನ ಪ್ರದರ್ಶನ ಮಾಡಿದರೆ ಮುಂದೆ ಮಹಾರಾಷ್ಟ್ರದ ಅನೇಕ ಭಾಗಗಳನ್ನು ಕರ್ನಾಟಕಕ್ಕೆ ಸೇರಿಸಬೇಕಾಗುತ್ತದೆ. ಆದ್ದರಿಂದ ಈ ಕೂಡಲೇ ಪ್ರಧಾನ ಮಂತ್ರಿಗಳು, ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿ, ಗಡಿ ವಿಚಾರದಲ್ಲಿ ಖ್ಯಾತೆ ತೆಗೆಯದಂತೆ ಬುದ್ಧಿವಾದ ಹೇಳಬೇಕು. ಇಲ್ಲವಾದ ಪಕ್ಷದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಡಾ. ಶಾಂತರಾಜೇಅರಸ್, ಪ್ರಭುಶಂಕರ್ ಎಂ.ಬಿ, ಕೃಷ್ಣಯ್ಯ ಸಿ ಎಚ್, ವಿಜಯೇಂದ್ರ, ಕುಮಾರ್ ಗೌಡ, ಎಸ್ ಚಂದ್ರು, ಎಳನೀರು ರಾಮಣ್ಣ, ದರ್ಶನ್ ಗೌಡ, ಮಲ್ಲೇಶ್ ಗೊರೂರು, ನಾಗಣ್ಣ, ಬಂಗಾರಪ್ಪ, ನಂದ ಕುಮಾರ್, ಗಣೇಶ್ ಪ್ರಸಾದ್, ವೈಕೆ ನಾಗರಾಜ್, ಪ್ರದೀಪ್, ದಿಲೀಪ್, ಮಹದೇವ ಸ್ವಾಮಿ, ಹಾಗೂ ವಿಜಯದೇವರಾಜೇ ಅರಸ್ ಉಪಸ್ಥಿತರಿದ್ದರು.