ಮನೆ ಸುದ್ದಿ ಜಾಲ ಚಲನೆ ಇಲ್ಲದಿದ್ದರೆ ಬದಲಾವಣೆ ಸಾಧ್ಯವಾಗದು: ವಿಪಕ್ಷ ನಾಯಕ ಸಿದ್ದರಾಮಯ್ಯ

ಚಲನೆ ಇಲ್ಲದಿದ್ದರೆ ಬದಲಾವಣೆ ಸಾಧ್ಯವಾಗದು: ವಿಪಕ್ಷ ನಾಯಕ ಸಿದ್ದರಾಮಯ್ಯ

0

ಮೈಸೂರು: ಜಾತಿ ವ್ಯವಸ್ಥೆ ನಿಂತ ನೀರಾಗಿದೆ. ಚಲನೆ ಇಲ್ಲದಿದ್ದರೆ ಬದಲಾವಣೆ ಸಾಧ್ಯವಾಗದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘ ನಗರ, ತಾಲ್ಲೂಕು ಹಾಗೂ ಜಿಲ್ಲಾ ಘಟಕದಿಂದ ಇಲ್ಲಿನ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ನೋವು ಅನುಭವಿಸದಿದ್ದರೆ ಸುಧಾರಣೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಕನಕದಾಸರನ್ನೂ ಹೆಜ್ಜೆ ಹೆಜ್ಜೆಗೂ ಅವಮಾನಿಸಿದ್ದಾರೆ. ವ್ಯಾಸರಾಯರೇ ಮಂತ್ರ ಹೇಳಿಕೊಡಲು ಅವಮಾನಿಸಿದ್ದರು ಎಂದು ಹೇಳಿದರು.

ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್‌, ಗಾಂಧೀಜಿ ಮೊದಲಾದ ಸುಧಾರಣಾವಾದಿಗಳು ಬಹಳಷ್ಟು ಪ್ರಯತ್ನಿಸಿದರೂ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಹಾಗೆಯೇ ಉಳಿದಿದೆ ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

 ‘1988ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ, ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರು. 500ನೇ ಕನಕ ಜಯಂತಿಯನ್ನು ಸರ್ಕಾರದಿಂದ ವರ್ಷವಿಡೀ ಆಚರಿಸೋಣ ಎಂದಿದ್ದೆ. ಅವರು ಒಪ್ಪಿದ್ದರು. ಆದರೆ, ನಮ್ಮ ಸರ್ಕಾರ ಮಧ್ಯದಲ್ಲೇ ‌ಹೋಯಿತು. ಮುಂದೆ ಬಂದ ಸರ್ಕಾರ ಸಮಾರೋಪ ಸಮಾರಂಭ ಮಾಡಲೇ ಇಲ್ಲ. ಇದನ್ನೆಲ್ಲ ತಿಳಿದುಕೊಳ್ಳಬೇಕು ಎಂದರು.

ಕನಕದಾಸರ ಸಾಹಿತ್ಯ ಜನರಿಗೆ ಸಿಗಲೆಂದು ಕಡಿಮೆ ದರದಲ್ಲಿ ಪುಸ್ತಕಗಳನ್ನು ಮುದ್ರಿಸಿ ಹಂಚುವ ಕೆಲಸವನ್ನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೆ. ಹಿಂದೆ ಕನಕದಾಸರಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿರಲಿಲ್ಲ.‌ ನಾನು ರಾಜ್ಯದಾದ್ಯಂತ ಸಂಚರಿಸಿ ಜಯಂತಿ ಕಾರ್ಯಕ್ರಮ ಮಾಡಿದ್ದರಿಂದ ಜಾಗೃತಿ ಮೂಡಲು ಶುರುವಾಯಿತು ಎಂದು ತಿಳಿಸಿದರು.

ವಿಧಾನಸೌಧದ ಮುಂಭಾಗ ವಾಲ್ಮೀಕಿ, ಕನಕದಾಸರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ನಾವೇ. ಆದರೆ, ಇದರ ಲಾಭ ಪಡೆಯುತ್ತಿರುವುದು ಬೇರೆಯವರು. ಅಸಮಾನತೆ, ಜಾತಿ ವ್ಯವಸ್ಥೆ ಮಾಡಿದವರೊಂದಿಗೆ ನಾವು ಹೋಗಬೇಕೇ, ಬೇಡವೇ ಎಂದು ಜನರು ಯೋಚಿಸಬೇಕು ಎಂದು ತಿಳಿಸಿದರು.

ಸಮಾಜದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರು, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಿದರು. ಇದಕ್ಕೂ ಮುನ್ನ ನಂಜರಾಜ ಬಹದ್ದೂರ್‌ ಛತ್ರದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು. ಕಲಾತಂಡಗಳು ಮೆರುಗು ನೀಡಿದವು.

ಹಿಂದಿನ ಲೇಖನಗಡಿ ವಿವಾದ: ಮಹಾರಾಷ್ಟ್ರ ಸಿಎಂ ಹೇಳಿಕೆ ವಿರೋಧಿಸಿ ಪ್ರತಿಭಟನೆ
ಮುಂದಿನ ಲೇಖನಹೃದಯದ ಹಾಗೂ ಮೂಳೆಗಳ ಆರೋಗ್ಯಕ್ಕೆ ಅರಿವೆ ಸೊಪ್ಪಿನ ಸೇವನೆ ಒಳ್ಳೆಯದು