ಬೆಂಗಳೂರು(Bengaluru): ಎಲ್’ಎಸ್‌ಡಿ, ಹೈಡ್ರೋಗಾಂಜಾ, ಹ್ಯಾಶಿಷ್, ಕೊಕೇನ್ ಸೇರಿದಂತೆ ವಿವಿಧ ಮಾದರಿಯ ಮಾದಕ ವಸ್ತು ಮಾರಾಟ, ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್’ಸಿಬಿ) ಅಧಿಕಾರಿಗಳು ಕಳೆದ 2 ತಿಂಗಳಿನಲ್ಲಿ 27 ಮಂದಿಯನ್ನು ಬಂಧಿಸಿದ್ದಾರೆ.
ಡಾರ್ಕ್’ನೆಟ್, ವಾಟ್ಸ್’ಆ್ಯಪ್, ಟೆಲಿಗ್ರಾಂ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದ ಪೆಡ್ಲರ್’ಗಳು ಡ್ರಗ್ಸ್ ಮಾರುತ್ತಿದ್ದರು.
ಈ ಬಗ್ಗೆ ಮಾಹಿತಿ ಕಲೆ ಹಾಕಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದು ಎನ್’ಸಿಬಿ ಬೆಂಗಳೂರು ವಲಯ ನಿರ್ದೇಶಕ ಪಿ. ಅರವಿಂದನ್ ಹೇಳಿದರು.
ಎಲ್‌ಎಸ್‌ಡಿ ಕಾಗದ, ಕೊಕೇನ್, ಹಶೀಷ್, ಗಾಂಜಾ ಸೇರಿದಂತೆ ವಿವಿಧ ಪ್ರಕಾರದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಬೆಂಗಳೂರು, ಇರಾನ್, ಮುಂಬೈ, ತಮಿಳುನಾಡು, ಹೈದರಾಬಾದ್, ಮಿಜೋರಾಂ, ಹರಿಯಾಣ, ದೆಹಲಿ, ರಾಜಸ್ಥಾನ, ಕೋಲ್ಕತ್ತ ಹಾಗೂ ಉತ್ತರ ಪ್ರದೇಶದ 27 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಡ್ರಗ್ಸ್ ಮಾರುವವರು, ಸಾಗಿಸುವವರು, ಖರೀದಿಸುವವರು ಹಾಗೂ ಸಹಾಯ ಮಾಡಿದವರನ್ನೂ ಆರೋಪಿಗಳನ್ನಾಗಿ ಬಂಧಿಸಲಾಗಿದೆ. ಖಾಸಗಿ ಕಂಪನಿ ಉದ್ಯೋಗಿಗಳು, ವಿದ್ಯಾರ್ಥಿಗಳೂ ಬಂಧಿತರ ಪಟ್ಟಿಯಲ್ಲಿದ್ದಾರೆ ಎಂದರು.
ಆನ್’ಲೈನ್ ಮೂಲಕವೇ ಡ್ರಗ್ಸ್ ಖರೀದಿ ನಡೆಯುತ್ತಿತ್ತು. ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಪಾವತಿ ಮಾಡಲಾಗುತ್ತಿತ್ತು. ಜಾಲದಲ್ಲಿರುವ ಮತ್ತಷ್ಟು ಮಂದಿಯ ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ ಎಂದು ಅರವಿಂದನ್ ವಿವರಿಸಿದರು.