ಮಂಡ್ಯ: ಪ್ರತಿ ವರ್ಷದಂತೆ ಈ ವರ್ಷವು ಪೋಲಿಯೊ ಲಸಿಕಾ ಪ್ರಕ್ರಿಯೆಯನ್ನು ಫೆ.27ರಿಂದ ಮಾರ್ಚ್ 2 ರವರೆಗೆ ನಡೆಸಲಾಗುತ್ತಿದ್ದು ಎಲ್ಲಾ ಇಲಾಖೆಯ ಸಹಕಾರ ಮುಖ್ಯ ಎಂದು ಜಿಲ್ಲಾಧಿಕಾರಿ ಎಸ್. ಅಶ್ವಥಿ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೊ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2007ರಲ್ಲಿ ಕೊನೆಯ ಪ್ರಕರಣ ರಾಜ್ಯದಲ್ಲಿ ದಾಖಲಾಗಿದ್ದು, ಅದೂ ಕೂಡ ವಲಸೆ ಬಂದವರಲ್ಲಿ ಕಂಡು ಬಂದಿದ್ದೇ ಹೊರತಾಗಿ ಪೋಲಿಯೊ ವೈರಸನ್ನು ಅಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದೇವೆ ಎಂದರು.
ಕಳೆದ ವರ್ಷ ಸುಮಾರು 1,26,365 ಲಸಿಕೆ ಕೊಡುವುದರ ಮೂಲಕ ಶೇ 104.2 ರಷ್ಟು ಫಲಿತಾಂಶ ಸಾಧಿಸಿದ್ದೆವು ಹಾಗೆಯೇ ಈ ವರ್ಷವೂ ಒಟ್ಟು 723 ಪೋಲಿಯೊ ಬೂತ್ಗಳನ್ನು ಸ್ಥಾಪಿಸಿ, ಒಟ್ಟು 24 ಟ್ರಾನ್ಸಿಟ್ ತಂಡಗಳು, 2892 ಹೌಸ್ ಟು ಹೌಸ್ ತಂಡಗಳೊಡನೆ ಸುಮಾರು 1.20ಲಕ್ಷ ಕ್ಕೂ ಅಧಿಕ ಲಸಿಕೆಯನ್ನು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದರು.
ಸರ್ಕಾರಿ, ಖಾಸಗಿ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಜನ ನಿಬಿಡ ಪ್ರದೇಶಗಳಲ್ಲಿ ಟ್ರಾನ್ಸಿಟ್ ಬೂತ್ಗಳನ್ನು ತೆರೆಯಲಾಗುತ್ತಿದ್ದು ಇದಕ್ಕೆ ಪೊಲೀಸ್ ಇಲಾಖೆಯ ಪೇದೆಗಳನ್ನು ಪೊಲೀಸ್ ಇಲಾಖೆ ನಿಯೋಜಿಸಬೇಕು ಎಂದರು.
ಅಭಿಯಾನಕ್ಕೆ ಅವಶ್ಯಕತೆ ಇರುವ ಮಾನವ ಸಂಪನ್ಮೂಲ ಹಾಗೂ ಲಸಿಕಾ ಕೇಂದ್ರ ತೆರೆಯಲು ಅಂಗನವಾಡಿ ಕೇಂದ್ರಗಳಲ್ಲಿ ಸ್ಥಳಾವಕಾಶಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರ ಅತ್ಯಾವಶ್ಯಕ ಎಂದರು.
ಕಾರ್ಯಕ್ರಮದ ದಿನ ಭಾನುವಾರದಂದು ಅವಶ್ಯವಿರುವ ಶಾಲೆಗಳಲ್ಲಿ ಬೂತ್ ತೆರೆಯಲು ಅವಕಾಶ ಕಲ್ಪಿಸಿ ಕೊಡಲು ಹಾಗೂ ಪ್ರತಿ ದಿನದ ಶಾಲಾ ಪ್ರಾರ್ಥನಾ ಸಮಯದಲ್ಲಿ ಪಲ್ಸ್ ಪೋಲಿಯೊ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.
ಈಗಾಗಲೇ ನಾವು ಪಲ್ಸ್ ಪೋಲಿಯೊ ವಾರದಲ್ಲಿದ್ದು, ಈ ಕಾರ್ಯಕ್ರಮಕ್ಕೆ ವಿದ್ಯುತ್ ಬಹುಮುಖ್ಯವಾಗಿ ಬೇಕಾಗಿದ್ದು, ಅದಕ್ಕೆ 3 ದಿವಸಗಳ ಮುಂಚಿತವಾಗಿ ಫೆ 24 ರಿಂದ ಮಾರ್ಚ್ 02 ವರೆಗೂ ಸಾರ್ವಜನಿಕ ಹಿತದೃಷ್ಟಿಯಿಂದ 24 ಗಂಟೆಗಳ ಕಾಲ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಬೇಕೆಂದು ವಿದ್ಯುಚ್ಛಕ್ತಿ ಮಂಡಳಿಗೆ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ಗುತ್ತಿಗೆಯ ಮೇರೆಗೆ ಸೇವೆ ಸಲ್ಲಿಸುತ್ತಿರುವ ಖಾಸಗಿ ವಾಹನಗಳನ್ನು ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿಯೇ ಒದಗಿಸುವಲ್ಲಿ ಸಹಕರಿಸಿ ಎಂದು ಹೇಳಿದರು.