ಮನೆ ಸುದ್ದಿ ಜಾಲ ಕಟ್ಟುವುದು ಭಾರತೀಯ ಸಂಸ್ಕೃತಿ, ಒಡೆಯುವುದಲ್ಲ: ಎಸ್.ಎನ್.ಸೇತುರಾಂ

ಕಟ್ಟುವುದು ಭಾರತೀಯ ಸಂಸ್ಕೃತಿ, ಒಡೆಯುವುದಲ್ಲ: ಎಸ್.ಎನ್.ಸೇತುರಾಂ

0

ಮೈಸೂರು(Mysuru): ಕಟ್ಟುವುದು ಭಾರತೀಯ ಸಂಸ್ಕೃತಿಯೇ ಹೊರತು ಒಡೆಯುವುದಲ್ಲ ಎಂದು ರಂಗಕರ್ಮಿ ಎಸ್.ಎನ್.ಸೇತುರಾಂ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ರಂಗಾಯಣದಲ್ಲಿ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ದಲ್ಲಿ ಶನಿವಾರ ಆರಂಭಗೊಂಡ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸರ್ವಜ‌ನಾಂಗದ ಶಾಂತಿಯ ತೋಟಕ್ಕೆ ಕಲ್ಲು ಹೊಡೆಯುವವರು, ಪ್ರತಿಭಟಿಸುವವರನ್ನು ಹಲವರು ಬೆಂಬಲಿಸುತ್ತಿದ್ದಾರೆ. ನಮ್ಮ ಮನೆಯನ್ನು ಒಡೆಯಲು ಮುಂದಾದವರನ್ನು ಸಹಿಸಿಕೊಳ್ಳಬೇಕೆ?  ಎಂದು ಪ್ರಶ್ನಿಸಿದರು.

ಹೊಲಸು ನೀರು ಎಂದಿಗೂ ಶುದ್ಧವಾಗದು. ಹೀಗಾಗಿ ನಾವು ವೈಯಕ್ತಿಕವಾಗಿ ಸ್ವಚ್ಛ ನದಿಯಾಗಬೇಕು. ಹೊಲಸು ನೀರನ್ನು ಕೊಚ್ಚಿಹಾಕಬೇಕು ಎಂದು ಪ್ರತಿಪಾದಿಸಿದರು.

ಭಾರತದಲ್ಲೇ ಕೂತು ಭಾರತೀಯತೆಯ ಚರ್ಚೆ ಮಾಡಬೇಕಾದ ಸ್ಥಿತಿ ಬಂದಿರುವುದು ದುರಂತವಾಗಿದೆ. ದೇಶದ ಜನರು ಯಾರ ಮೇಲೂ ದಂಡೆತ್ತಿ‌ ಹೋಗಲಿಲ್ಲ. ಕಾರಣ ಸಂಸ್ಕೃತಿ, ಸಂಪನ್ಮೂಲ ಇಲ್ಲಿಯೇ ಇತ್ತಲ್ಲವೇ ಎಂದರು.

ಒಲೈಕೆ ರಾಜಕಾರಣದಿಂದ ಭಾರತೀಯತೆ ಚದುರಿ ಹೋಗಿದೆ. ಬಹುಮತದಿಂದ ಆಯ್ಕೆಯಾದವರನ್ನು ಟೀಕಿಸುವುದೇ ಕೆಲವರ ಪ್ರವೃತ್ತಿಯಾಗಿದೆ ಎಂದು ಕಿಡಿಕಾರಿದರು. ಜ್ಞಾನ, ವಿವೇಕ ಹೆಚ್ಚಿದ್ದರೆ ತರ್ಕ ಇರುತ್ತದೆ. ಎರಡೂ ಇಲ್ಲದವರೂ ವಾದಕ್ಕೆ ಕುಳಿತಿದ್ದಾರೆ. ರಾಮಾಯಣ, ಮಹಾಭಾರತವನ್ನು ಕಾವ್ಯವಾಗಿ ನೋಡುತ್ತಿಲ್ಲ. ಅಲ್ಲಿನ ಪಾತ್ರಗಳನ್ನು ಟೀಕಿಸುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಅಶೋಕ, ಸಾಲುಮರ ನೆಡಸಿದ, ಪೃಥ್ವಿರಾಜ ಬಂದು ಸಂಯುಕ್ತೆ ಎತ್ತಿಕೊಂಡು ಹೋದ ಎಂಬುದೇ ಚರಿತ್ರೆಯಾಗಿದೆ‌. ಸ್ನೇಹಿತನ ಪದ್ಯ ಕೇಳಿ ದಂಡೆತ್ತಿ ಬಂದವನನ್ನು ಪೃಥ್ವಿರಾಜ ಕ್ಷಮಿಸಿರುವುದು ಇತಿಹಾಸ ಹೇಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣ ಉದ್ಘಾಟಿಸಿದ ಲೇಖಕಿ ಡಾ.ಎಸ್.ಆರ್.ಲೀಲಾ ಮಾತನಾಡಿ, ಭಾರತೀಯ ರಂಗಕಲೆಯಲ್ಲಿ ಸಂಗೀತ, ಗಾನ ಮತ್ತು ನೃತ್ಯಕ್ಕೆ ಮಹತ್ವದ ಸ್ಥಾನವಿದೆ. ಬ್ರಿಟಿಷರು ಬಂದ ನಂತರ ವಾಚನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿತು. ಆದರೂ, ಇಂದಿನ ಸಿನಿಮಾದಲ್ಲಿ ಗಾನ ಹಾಗೂ ನೃತ್ಯ ಉಳಿದುಕೊಂಡಿದೆ. ಅದಕ್ಕೆ ಕಾರಣ ನಮ್ಮ ಪರಂಪರೆ ಎಂದರು.

ಭರತನ ನಾಟ್ಯಶಾಸ್ತ್ರದ ಪರಿಕಲ್ಪನೆ ಸರ್ವಗ್ರಾಹಿ ಆಗಿದೆ. ದೇಶದ ಎಲ್ಲ ಕಲೆಗಳಿಗೆ ಮೂಲವಾಗಿರುವ ಅದರಲ್ಲಿ ನವ ರಸಗಳು, ದಶರೂಪಕಗಳು ಎಲ್ಲ ಎಲ್ಲವೂ ಅಡಕ ಎಂದು ಹೇಳಿದರು.

ಪ್ರಾಚೀನ ಸಂಸ್ಕೃತ ನಾಟಕಗಳಲ್ಲಿ ಪುರಾಣ ನಾಟಕಗಳಿದ್ದವು ಎಂಬ ತಪ್ಪು ಕಲ್ಪನೆಯಿದೆ. ಸಾಮಾಜಿಕ ನಾಟಕಗಳೂ ಇದ್ದವು. ಮೃಚ್ಛಕಟಿಕ ಅದಕ್ಕೆ ಉದಾಹರಣೆ’ ಎಂದರು. ‘ನಾಟಕಕ್ಕೆ ನೈಜತೆಯ ಅಡಿಪಾಯ. ಕಣ್ಣಿಗೆ ಹಬ್ಬವನ್ನು ಉಂಟುಮಾಡುವ ಯಜ್ಞವೆಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬರಿಗೆ ಬೇಕಾದ ಪ್ರದರ್ಶಕ ಕಲೆಯಿದು ಎಂದು ತಿಳಿಸಿದರು‌.

ಸಂಕಿರಣದ ಸಂಚಾಲಕ ಎಸ್.ರಾಮನಾಥ, ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪ ನಿರ್ದೇಶಕರಾದ ನಿರ್ಮಲಾ ಮಠಪತಿ, ರಂಗೋತ್ಸವ ಸಂಚಾಲಕ ಜಗದೀಶ್ ಮನೆವಾರ್ತೆ ಇದ್ದರು.