ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ದತ್ತಾ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿತ್ತು. ಅವರನ್ನು ಏಪ್ರಿಲ್ 2020 ರಲ್ಲಿ ಬಾಂಬೆ ಹೈಕೋರ್ಟ್’ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು.
ಕಲ್ಕತ್ತಾ ಹೈಕೋರ್ಟ್’ನ ನಿವೃತ್ತ ನ್ಯಾಯಮೂರ್ತಿ ಸಲೀಲ್ ಕುಮಾರ್ ದತ್ತಾ ಅವರ ಪುತ್ರ ನ್ಯಾ. ದೀಪಂಕರ್ ದತ್ತಾ. ಫೆಬ್ರವರಿ 1965 ರಲ್ಲಿ ಜನನ. 1989ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನ್ಯಾ, ದೀಪಂಕರ್ ಅವರು ಅದೇ ವರ್ಷ ವಕೀಲರಾಗಿ ವೃತ್ತಿ ಆರಂಭಿಸಿದರು.
ಕಲ್ಕತ್ತಾ ಹೈಕೋರ್ಟ್’ನ ಖಾಯಂ ನ್ಯಾಯಮೂರ್ತಿಯಾಗಿ ಜೂನ್ 22, 2006 ರಂದು ಪದೋನ್ನತಿ ಪಡೆಯುವ ಮೊದಲು ಸಾಂವಿಧಾನಿಕ ಮತ್ತು ಸಿವಿಲ್ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್’ಗಳಲ್ಲಿ ಪ್ರಾಕ್ಟೀಸ್ ಮಾಡಿದ್ದರು. ನ್ಯಾ. ದೀಪಂಕರ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 28 ಕ್ಕೆ ಏರಲಿದೆ. ಸುಪ್ರೀಂ ಕೋರ್ಟ್’ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 34 ಆಗಿದೆ.