ಮನೆ ಅಪರಾಧ ನವದೆಹಲಿ: ಬಾಲಕಿ ಮೇಲೆ ಆ್ಯಸಿಡ್ ದಾಳಿ- ಓರ್ವನ ಬಂಧನ

ನವದೆಹಲಿ: ಬಾಲಕಿ ಮೇಲೆ ಆ್ಯಸಿಡ್ ದಾಳಿ- ಓರ್ವನ ಬಂಧನ

0

ನವದೆಹಲಿ(Newdelhi): ಬೈಕ್‌’ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಾಲಕಿ ಮೇಲೆ ಆಸಿಡ್‌ ಮಾದರಿಯ ರಾಸಾಯನಿಕ ದ್ರವ ಎರಚಿ ಪರಾರಿಯಾಗಿರುವ ಘಟನೆ ಪಶ್ಚಿಮ ದೆಹಲಿಯ ಉತ್ತಮ್‌ ನಗರದ ಮೋಹನ್‌ ಗಾರ್ಡನ್‌ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಬಾಲಕಿಯನ್ನು ಸಫ್ತರ್‌’ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಮುಖದ ಮೇಲೆ ಶೇ 7 ರಿಂದ 8ರಷ್ಟು ಸುಟ್ಟ ಗಾಯಗಳಾಗಿವೆ. ಆಕೆಯ ಕಣ್ಣುಗಳಿಗೂ ಹಾನಿಯಾಗಿದೆ. ತೀವ್ರ ನಿಗಾ ಘಟಕದಲ್ಲಿ (ಐಸಿಯು) ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸಂತ್ರಸ್ತ ಬಾಲಕಿಗೆ 17 ವರ್ಷ ವಯಸ್ಸು. ಆಕೆ ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ತನ್ನ ತಂಗಿಯ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌’ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಆಸಿಡ್‌ ಮಾದರಿಯ ರಾಸಾಯನಿಕ ದ್ರವ ಎರಚಿದ್ದಾಗಿ ಗೊತ್ತಾಗಿದೆ.

ಈ ಬಗ್ಗೆ ಮೋಹನ್‌ ಗಾರ್ಡನ್‌ ಠಾಣೆಯ ಅಧಿಕಾರಿಗಳಿಗೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಕುರಿತ ಮಾಹಿತಿ ಲಭಿಸಿತ್ತು ಎಂದು ದ್ವಾರಕಾ ವಿಭಾಗದ ಡಿಸಿಪಿ ಎಂ.ಹರ್ಷವರ್ಧನ್‌ ಮಾಹಿತಿ ನೀಡಿದ್ದಾರೆ.

ದುಷ್ಕರ್ಮಿಗಳು ಬಾಲಕಿ ಮೇಲೆ ರಾಸಾಯನಿಕ ದ್ರವ ಎರಚುತ್ತಿರುವ ದೃಶ್ಯವು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯು ಇಬ್ಬರ ಹೆಸರನ್ನು ತಿಳಿಸಿದ್ದು, ಈ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಆಸಿಡ್‌ ಮಾರಾಟ ಅವ್ಯಾಹತವಾಗಿದೆ:

ಆಯೋಗವು ಸಾಕಷ್ಟು ನೋಟಿಸ್‌’ಗಳನ್ನು ಜಾರಿಗೊಳಿಸಿದೆ. ಹಲವು ಶಿಫಾರಸುಗಳನ್ನು ಮಾಡಿದೆ. ಹೀಗಿದ್ದರೂ ಆಸಿಡ್‌ ಮಾರಾಟ ಅವ್ಯಾಹತವಾಗಿದೆ. ಯಾರು ಬೇಕಾದರೂ ಆಸಿಡ್‌ ಖರೀದಿಸಿ ಬಾಲಕಿಯರ ಮೇಲೆ ಎರಚಬಹುದಾಗಿದೆ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳದೆ ಸರ್ಕಾರಗಳು ನಿದ್ರೆಗೆ ಜಾರಿರುವುದಾದರೂ ಏಕೆ ? ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಳಿವಾಲ್‌ ಪ್ರಶ್ನಿಸಿದ್ದಾರೆ.

ಟ್ವಿಟರ್‌’ನಲ್ಲಿ ವಿಡಿಯೊವೊಂದನ್ನು ಹಾಕಿರುವ ಅವರು, ಆಸಿಡ್‌ ಮಾರಾಟ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದಿದ್ದಾರೆ.