ಮನೆ ರಾಜಕೀಯ ಭಯೋತ್ಪಾದಕರಿಗೆ ಬೆಂಬಲ ಕೊಡುವ ಮೂಲಕ ಕಾಂಗ್ರೆಸ್’ನಿಂದ ಮತಬ್ಯಾಂಕ್ ರಾಜಕೀಯ: ನಳಿನ್ ಕುಮಾರ್ ಕಟೀಲ್

ಭಯೋತ್ಪಾದಕರಿಗೆ ಬೆಂಬಲ ಕೊಡುವ ಮೂಲಕ ಕಾಂಗ್ರೆಸ್’ನಿಂದ ಮತಬ್ಯಾಂಕ್ ರಾಜಕೀಯ: ನಳಿನ್ ಕುಮಾರ್ ಕಟೀಲ್

0

ಬೆಂಗಳೂರು(Bengaluru): ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ಉತ್ತುಂಗ ಸ್ಥಿತಿಯಲ್ಲಿತ್ತು. ಕಾಂಗ್ರೆಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ಕೊಡುವ ಮೂಲಕ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಈ ಕುರಿತಾಗಿ ಶುಕ್ರವಾರ ಹೇಳಿಕೆ ನೀಡಿರುವ ಅವರು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಬೈಯ್ಯುವ ಬರದಲ್ಲಿ ಭಯೋತ್ಪಾದಕರ ಮೇಲಿನ ತಮ್ಮ ಪ್ರೇಮವನ್ನು ಜಗಜ್ಜಾಹೀರು ಪಡಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ದೇಶದ ಭದ್ರತೆ, ಏಕತೆ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಡುತ್ತಿರುವುದು ಇದೇ ಮೊದಲಲ್ಲ. ಮಂಗಳೂರಿನ ಕುಕ್ಕರ್ ಬಾಂಬ್ ವಿಚಾರ ಭಯೋತ್ಪಾದನೆಗೆ ಸಮಾನವಲ್ಲ ಎಂದು ಮಾತನಾಡುವ ಇವರು ಅಧಿಕಾರಕ್ಕೆ ಬರದಂತೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಪೂರ್ಣಪ್ರಮಾಣದಲ್ಲಿ ಮೂಲೆಗುಂಪು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಾಟ್ಲಾ ಹೌಸ್ ಪ್ರಕರಣದಲ್ಲಿ ಕಾಂಗ್ರೆಸ್’ನ ಅಂದಿನ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರು ಉಗ್ರರನ್ನು ಎನ್ ಕೌಂಟರ್ ಮಾಡಿದ್ದಕ್ಕಾಗಿ ಅತ್ತಿದ್ದುದು ನೆನಪಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹಿಂದೊಮ್ಮೆ ನೆಹರೂ ಮತದ ಲಾಭಕ್ಕಾಗಿ ಉರ್ದುವಿನಲ್ಲಿ ತನ್ನ ಮದುವೆ ಆಮಂತ್ರಣ ಪತ್ರವನ್ನು ಮುದ್ರಿಸಿದ್ದರು. ರಾಜೀವ್ ಗಾಂಧಿ ಕೂಡ ಭಿಂದ್ರನ್ ವಾಲೆಯನ್ನು ಒಬ್ಬ ಸಂತ ಎಂದು ಕರೆದಿದ್ದರು ಎಂದು ನೆನಪಿಸಿದ್ದಾರೆ.

ದೇಶದ ಭದ್ರತೆ ಮತ್ತು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯ ಚುನಾವಣೆ, ಗುಜರಾತ್ ಚುನಾವಣೆಯಲ್ಲಿ ಜನರು ಬಿಜೆಪಿ ಪರ ನಿಂತಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಹಗಲು ಗನಸು ಕಾಣುತ್ತಿರುವ ಕಾಂಗ್ರೆಸ್ ಅಧ್ಯಕ್ಷರಿಗೆ ಅದು ತಿರುಕನ ಕನಸು ಎಂಬುದರ ಅರಿವಾಗಿದೆ. ಆದ್ದರಿಂದಲೇ ಅವರು ಭಯೋತ್ಪಾದಕರ ಪರ ನಿಂತು ತಮ್ಮ ತುಷ್ಟೀಕರಣ ನೀತಿಯನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.