ಮನೆ ಸಾಹಿತ್ಯ ಕೊಡುಕೊಳ್ಳುವಿಕೆ ಇದ್ದರೆ ಮಾತ್ರ ಕಲೆ– ಸಂಸ್ಕೃತಿ ಬೆಳೆಯುತ್ತದೆ: ಅರವಿಂದ ಮಾಲಗತ್ತಿ

ಕೊಡುಕೊಳ್ಳುವಿಕೆ ಇದ್ದರೆ ಮಾತ್ರ ಕಲೆ– ಸಂಸ್ಕೃತಿ ಬೆಳೆಯುತ್ತದೆ: ಅರವಿಂದ ಮಾಲಗತ್ತಿ

0

ಮೈಸೂರು(Mysuru): ಕೊಡುಕೊಳ್ಳುವಿಕೆ ಇದ್ದರೆ ಮಾತ್ರ ಕಲೆ– ಸಂಸ್ಕೃತಿ ಬೆಳೆಯುತ್ತದೆ. ಇಲ್ಲದಿದ್ದರೆ ಜಡವಾಗುತ್ತದೆ ಎಂದು ಲೇಖಕ ಅರವಿಂದ ಮಾಲಗತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಕಿರುರಂಗಮಂದಿರದಲ್ಲಿ ‘ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್’ ಶುಕ್ರವಾರ ಆಯೋಜಿಸಿದ್ದ ‘ರಂಗಭೂಮಿ ಮತ್ತು ಜಾನಪದ ಕಲಾಪ್ರಕಾರಗಳ ತರಬೇತಿ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ, ಶಿಷ್ಟ ರಂಗಭೂಮಿಯ ಪ್ರಯೋಗಗಳಿಗಾಗಿ ರಂಗಾಯಣವನ್ನು ಸ್ಥಾಪಿಸಲಾಗಿದೆ. ಜಾನಪದ ರಂಗಭೂಮಿ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದ್ದು, ಅದನ್ನು ಉಳಿಸಿಕೊಳ್ಳಲು ಜಾನಪದ ಅಕಾಡೆಮಿಯೊಂದಕ್ಕೆ ಆಗದು. ರಂಗಾಯಣದಂಥ ಸಂಸ್ಥೆಯನ್ನೂ ಸರ್ಕಾರ ಕಟ್ಟಬೇಕು. ಯಕ್ಷಗಾನ ಅಕಾಡೆಮಿಯಲ್ಲಿ ಯಕ್ಷಗಾನ ಮಾತ್ರ ಮಾಡುವಂತೆ, ಜನಪದರ ರಂಗಪ್ರಯೋಗಗಳು ನಡೆಯಬೇಕು ಎಂದರು.

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಜಾನಪದವು ಪಳೆಯುಳಿಕೆಯಾದರೆ, ಭಾರತದಲ್ಲಿ ಜೀವಂತಿಕೆ. ಆಧುನಿಕ ರಂಗಭೂಮಿ ಕೊಂಬೆಯಾದರೆ ಜಾನಪದ ರಂಗಭೂಮಿ ಎಲ್ಲದಕ್ಕೂ ತಾಯಿ ಬೇರಾಗಿದೆ. ಆದರೆ, ಬೇರನ್ನು ಮರೆತು ಕೇವಲ ಕೊಂಬೆಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ವಾಸಿಸುವವರು ಜಾನಪದವನ್ನು ಗಂಭೀರವಾಗಿ ನೋಡದೇ ಉಪಭೋಗದ ಸರಕಾಗಿಸಿಕೊಂಡಿದ್ದಾರೆ. ಗ್ರಾಮೀಣರಲ್ಲಿ ಜಾನಪದವೆಂದರೆ ನಂಬಿಕೆ. ಒಂದೊಂದು ವಾದ್ಯಕ್ಕೂ ಕಥನಗಳಿವೆ. ಮೊದಲು ಚರ್ಮವಾದ್ಯವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದೆಂಬ ಮನಸ್ಥಿತಿಯಿತ್ತು. ಇದೀಗ ಅವರೇ ಚರ್ಮವಾದ್ಯ ನುಡಿಸುತ್ತಿದ್ದಾರೆ ಎಂದರು.

ಜಾನಪದದಲ್ಲಿ ನಂಬಿಕೆ ಹಾಗೂ ಪರಂ‍ಪರೆ ಪರಸ್ಪರ ಬೆರೆತಿರುತ್ತವೆ. ಡೊಳ್ಳು, ಚೌಡ್ಕಿ ವಾದ್ಯಗಳು ಹುಟ್ಟಿದ್ದಕ್ಕೂ ಒಂದೊಂದು ಕಥೆಯಿದೆ. ಗ್ರಾಮೀಣ ಕಲೆಗಳನ್ನು ಕಲಿಯಬೇಕು. ಕಲಿಯುವ ಆಸಕ್ತಿ ಎಂಬುದು ತಬ್ಬಲಿ ಕರುವಿನಂತೆ. ಪ್ರೇಕ್ಷಕರು ಕರುಳು ಬಳ್ಳಿ ಸಂಬಂಧವನ್ನು ಇರಿಸಿಕೊಂಡಿದ್ದರಿಂದಲೇ ಕಲೆಗಳು ಉಳಿದಿವೆ ಎಂದರು.

ಗ್ರಾಮೀಣರಿಗೆ ವಿಜ್ಞಾನ ಗೊತ್ತಿಲ್ಲ ಎನ್ನುವುದು ಸರಿಯಲ್ಲ. ಸಾಕ್ಷರರಿಗಿಂತ ಹೆಚ್ಚಿನ ಜ್ಞಾನವನ್ನು ಅವರು ಹೊಂದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ಕಾದಂಬರಿಯ ‘ಹಾರುವ ಓತಿ’ ಪತ್ತೆಗೆ ಕಾರಣನಾದ ಮಂದಣ್ಣ ಪಾತ್ರ ಉತ್ತಮ ಉದಾಹರಣೆ ಎಂದು ತಿಳಿಸಿದರು.

ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ರಂಗಸಮಾಜದ ಸದಸ್ಯ ಡಾ.ಟಿ.ಆರ್.ಗುರುಪ್ರಸಾದ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಡಾ.ಆರ್.ಜಯರಾಮ್, ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇದ್ದರು.