ಮನೆ ಕಾನೂನು ನೀರವ್ ಮೋದಿ ಹಗರಣ: ಲಿಖಿತ ದೂರು ಇಲ್ಲದೆ ಸಿಎಗಳ ವಿರುದ್ಧ ಐಸಿಎಐ ಸ್ವಯಂಪ್ರೇರಿತ ತನಿಖೆ ನಡೆಸಬಹುದು-...

ನೀರವ್ ಮೋದಿ ಹಗರಣ: ಲಿಖಿತ ದೂರು ಇಲ್ಲದೆ ಸಿಎಗಳ ವಿರುದ್ಧ ಐಸಿಎಐ ಸ್ವಯಂಪ್ರೇರಿತ ತನಿಖೆ ನಡೆಸಬಹುದು- ದೆಹಲಿ ಹೈಕೋರ್ಟ್

0

ಲಿಖಿತ ದೂರು ಇಲ್ಲದಿದ್ದಾಗಲೂ ಕೂಡ ತನ್ನ ಸದಸ್ಯರ ವಿರುದ್ಧ ಸ್ವಪ್ರೇರಿತ ಶಿಸ್ತಿನ ಕ್ರಮ ಆರಂಭಿಸುವ ಅಧಿಕಾರ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಗೆ ಇದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

[ಲೆಕ್ಕ ಪರಿಶೋಧಕ ಸಂಜಯ್ ಜೈನ್ ಮತ್ತು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡುವಣ ಪ್ರಕರಣ].

ಲೆಕ್ಕ ಪರಿಶೋಧಕರ ಕಾಯಿದೆ- 1949ರ ಸೆಕ್ಷನ್ 21ರ ಪ್ರಕಾರ ಲಿಖಿತ ದೂರು ಅಥವಾ ಆರೋಪ ಇಲ್ಲದಿದ್ದಾಗಲೂ ಸ್ವಪ್ರೇರಿತವಾಗಿ ಮತ್ತು ಅಡೆತಡ ಇಲ್ಲದೆ ತನಿಖೆ ಮುಂದುವರಿಸಲು ಐಸಿಎಐಗೆ ಅಧಿಕಾರವಿದೆ ಎಂದು ನ್ಯಾ. ಯಶವಂತ್ ವರ್ಮಾ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

“ಸೆಕ್ಷನ್ 21 ರ ಅಡಿಯಲ್ಲಿ ತನಿಖೆ ಆರಂಭಿಸಲು ಲಿಖಿತ ದೂರು ಅಥವಾ ಲಿಖಿತ ರೂಪದ ಆರೋಪದ ಪೂರ್ವ-ಅವಶ್ಯಕತೆ ಇದೆ ಎಂದು ಯಾವುದೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಾರದು” ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.

ಸೆಕ್ಷನ್ 21 ರಲ್ಲಿ ಒಳಗೊಂಡಿರುವ “ಯಾವುದೇ ಮಾಹಿತಿ”  ಎಂಬ ಪದದ ಅರ್ಥ ಸಂಸ್ಥೆಯ ಅರಿವಿಗೆ ಕಾರಣವಾಗುವ ಗಮನಕ್ಕೆ ಬರುವಂತಹ ಯಾವುದೇ ಸಾಕ್ಷ್ಯ ಅಥವಾ ಸಂಗತಿಗೂ ಅನ್ವಯಿಸುತ್ತದೆ ಎಂದು ಅದು ಹೇಳಿದೆ.

“ಆ ದಾಖಲೆಯು ಅಗತ್ಯವಾಗಿ ಲಿಖಿತವಾಗಿ ಇರಬೇಕೆಂದಾಗಲಿ ಅಥವಾ ಸಂಸ್ಥೆಯ ಗಮನಕ್ಕೆ ತರಲು ವ್ಯಕ್ತಿ ಆಯ್ಕೆಮಾಡಬಹುದಾದ ಯಾವುದೇ ಒಂದು ದಾಖಲೆಗೆ ಸೀಮಿತಗೊಳಿಸಲಾಗಿದೆ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ವ್ಯತಿರಿಕ್ತವಾದ ವಾದವನ್ನು ಅಂಗೀಕರಿಸುವುದು “ಯಾವುದೇ ಮಾಹಿತಿಯ” ಆಧಾರದ ಮೇಲೆ ಸಂಸ್ಥೆಯು ಮುಂದುವರಿಯಲು ಅನುವು ಮಾಡಿಕೊಡುವ ಸೆಕ್ಷನ್ 21ರ ಅಡಿ ನೀಡಲಾದ ಅಧಿಕಾರದ ವ್ಯಾಪ್ತಿ ಮತ್ತು ವೈಶಾಲ್ಯವನ್ನು ನಿರ್ಬಂಧಿಸುತ್ತದೆ ” ಎಂದು ಪೀಠ ಹೇಳಿದೆ.

ಆದಾಗ್ಯೂ ತನಿಖೆ ಆರಂಭಿಸಲು ಕೇವಲ ಕೇವಲ ಸುದ್ದಿಯ ವರದಿ ಸಾಲದು. ವಾಸ್ತವಾಂಶ ಮತ್ತು ಘಟನೆಯ ಬಗ್ಗೆ ತಿಳಿಯಲು ಮಾತ್ರ ಅದನ್ನು ಬಾಹ್ಯ ಮೂಲವಾಗಿ ಬಳಸಬಹುದು ಎಂದು ಪೀಠ ಸ್ಪಷ್ಟಪಡಿಸಿದೆ. 

ಐಸಿಎಐ ತಮ್ಮ ವಿರುದ್ಧ ಆರಂಭಿಸಿರುವ ಶಿಸ್ತು ಕ್ರಮ ರದ್ದುಪಡಿಸುವಂತೆ ಕೋರಿ ಕೆಲವು ಲೆಕ್ಕ ಪರಿಶೋಧಕರು ಸಲ್ಲಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ವರ್ಮಾ ಅವರು  ಈ ಆದೇಶ ನೀಡಿದ್ದಾರೆ

ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಬ್ಯಾಂಕ್ಗಳಿಗೆ ಸುಮಾರು ₹ 12,000 ಕೋಟಿ ವಂಚಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಐಸಿಎಐ, ಅರ್ಜಿದಾರರಾದ ಕೆಲವು ಲೆಕ್ಕ ಪರಿಶೋಧಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇವರು ಲೆಕ್ಕಪರಿಶೋಧನೆಯ ವಿವಿಧ ಮಾನದಂಡಗಳನ್ನು ಅನುಸರಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.