ಮನೆ ರಾಜಕೀಯ ಅಧಿಕಾರಕ್ಕಾಗಿ ಜೆಡಿಎಸ್ ಯಾರ ಮನೆ ಬಾಗಿಲನ್ನೂ ಬಡಿದಿಲ್ಲ, ಮುಂದೆ ಬಡಿಯುವುದೂ ಇಲ್ಲ: ಹೆಚ್.ಡಿ.ಕೆ

ಅಧಿಕಾರಕ್ಕಾಗಿ ಜೆಡಿಎಸ್ ಯಾರ ಮನೆ ಬಾಗಿಲನ್ನೂ ಬಡಿದಿಲ್ಲ, ಮುಂದೆ ಬಡಿಯುವುದೂ ಇಲ್ಲ: ಹೆಚ್.ಡಿ.ಕೆ

0

ಬೆಂಗಳೂರು: ಯಾವುದೇ ಕಾರಣಕ್ಕೂ ರಾಷ್ಟ್ರೀಯ  ಪಕ್ಷಗಳ ಮನೆ ಬಾಗಿಲಿಗೆ ಅಧಿಕಾರಕ್ಕಾಗಿ ಈವರೆಗೆ  ಹೋಗಿಲ್ಲ. ಇನ್ನು ಮುಂದೆಯೂ ಹೋಗುವುದಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಪಕ್ಷದ ನೂತನ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಾಷ್ಟ್ರೀಯ ಪಕ್ಷಗಳು ನಮ್ಮ ಮನೆ ಬಾಗಿಲಿಗೆ ಬಂದಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ‌ ಗುರಿ ತಲುಪಲು ಶ್ರಮಿಸುತ್ತೇವೆ.

2023ಕ್ಕೆ ಕಾರ್ಯಕರ್ತರ ಶ್ರಮ ಸಾಬೀತು ಮಾಡುತ್ತೇವೆ. ಆಗ ಜೆಡಿಎಸ್ ಗೆ ಶಕ್ತಿ ಏನು, ಜೆಡಿಎಸ್ ಬಿಟ್ಟು ಏನು ಮಾಡಲು ಆಗಲ್ಲ  ಎಂದಷ್ಟೇ ಹೇಳಿದ್ದೆ. ಅಂದರೆ ಬೇರೆ ಪಕ್ಷಗಳು ಕಡಿಮೆ ಸ್ಥಾನ ಗೆದ್ದರೆ ಅವರ ಜತೆ ಸೇರಿ ಅಧಿಕಾರ ಮಾಡುತ್ತೇವೆ ಎಂದಲ್ಲ. ನನ್ನ ಹೇಳಿಕೆಯ ಬಗ್ಗೆ ಅನ್ಯ ಅರ್ಥ ಬೇಡ. ಜನರಿಗೆ ತಪ್ಪು ಸಂದೇಶ ಹೋಗುವುದು ಬೇಡ.

ಕೊರೊನಾ ಇರುವ ಕಾರಣಕ್ಕೆ ಪಕ್ಷ ಸಂಘಟನೆಗೆ ವೇಗ‌ ನೀಡಿಲ್ಲ. ಕೆಲ ಕಾಲ ಸಂಘಟನೆಯ ಕೆಲಸ ನಿಂತಿತ್ತು. ನಮ್ಮ ಸಂಘಟನೆಯ ಚಟುವಟಿಕೆಗಳಿಂದ ಜನರಿಗೆ ತೊಂದರೆ ಆಗಬಾರದು ಎಂದು ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿಲ್ಲ.‌ ಆದರೆ ಆಂತರಿಕವಾಗಿ ಪಕ್ಷ ಸಂಘಟನೆ ಕಾರ್ಯ ಮಾಡುತ್ತಿದ್ದೇವೆ.

ಮುಖ್ಯಮಂತ್ರಿಗೆ ಟಾಂಗ್: ಬೇರೆ ಪಕ್ಷಗಳು ಅಂತಂತ್ರ ಆದಾಗ ಜೆಡಿಎಸ್  ಸ್ವತಂತ್ರವಾಗುತ್ತದೆ. ಅದು ಕುಮಾರಸ್ವಾಮಿ ಅವರ ಸದಾಶಯ ಆಗಿರಬಹುದು ಎಂದು‌ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದ್ದಾರೆ. ನಾವೆಂದೂ ಅತಂತ್ರರಾಗಿಲ್ಲ. ಅವರೇ ಅಂತಂತ್ರವಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ.‌ ಅವರ ಶಾಸಕರು, ಸಚಿವರು ಸಿದ್ದರಾಮಯ್ಯ ಸಂಪರ್ಕದಲ್ಲಿ ಇದ್ದಾರೆ ಎಂದರೆ, ಅಂಥವರಿಗೆ ಬಿಜೆಪಿ‌ ನಾಯಕರಲ್ಲೇ ಕಡಿವಾಣ ಹಾಕುವ ಸ್ಥಿತಿ ಇಲ್ಲ.‌ ಆದರೆ ಗೊಂದಲ ಸೃಷ್ಟಿ ಮಾಡುವುದಕ್ಕೆ ನಾವು ಎಲ್ಲೂ ಅವಕಾಶ ಕೊಟ್ಟಿಲ್ಲ.‌ ಅವರನ್ನು ಹದ್ದುಬಸ್ತಿನಲ್ಲಿ  ಇಟ್ಟುಕೊಳ್ಳಲಿಕ್ಕೆ ಆಗಿಲ್ಲ ಬಿಜೆಪಿ ಪಕ್ಷಕ್ಕೆ.

ಬಿಜೆಪಿ ಪಕ್ಷದ ಉಳಿವಿಗಾಗಿ ಅಲ್ಲಿನ ನಾಯಕರು ಏನು ಮಾಡುತ್ತಿದ್ದಾರೋ ಹಾಗೇ ನಾವು ಮಾಡುತ್ತಿದ್ದೇವೆ. ನಮ್ಮ ಪಕ್ಷದ ಸಂಘಟನೆಯನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಮುಂದೆ ಸವಾಲಿದೆ, ನಿಜ. ಗುರಿಯ ಬಗ್ಗೆಯೂ ನಮಗೆ ಸ್ಪಷ್ಟತೆ ಇದೆ. ಪ್ರತ್ಯುತ್ತರ ಕೊಡಲು ನಾವು ಸಿದ್ಧರಿದ್ದೇವೆ ಎಂದ ಅವರು, 2023ರಲ್ಲೀ 123 ಕ್ಷೇತ್ರಗಳನ್ನು ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತೇವೆ. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಚುನಾವಣೆಗೆ ಇನ್ನು ಹದಿನಾಲ್ಕು ತಿಂಗಳ ಸಮಯ ಇದೆ.

ಸಿಎಂ ಇಬ್ರಾಹಿಂ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ: ಮಾಜಿ ಸಚಿವ ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷಕ್ಕೆ ಬಂದರೆ ಸ್ವಾಗತ. ಇಬ್ರಾಹಿಂ ಅವರು ಹಿರಿಯರು ಇದ್ದಾರೆ.‌ ನಮ್ಮ ಪಕ್ಷ ಹಾಗೂ ಮಾಜಿ ಪ್ರಧಾನಿಗಳಾದ ದೇವೇಗೌಡರ ಏಳು ಬೀಳುವಿನಲ್ಲಿಯೂ ಜತೆಯಾದವರು.‌ ಮೇಲ್ಮನೆ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಅವರ ಹೆಸರು ಕೇಳಿ‌ ಬಂದಿತ್ತು. ಆ ಸ್ಥಾನ ಸಿಕ್ಕಿದರೆ ಉಪಯೋಗ ಮಾಡಿಕೊಳ್ಳಿ.‌ ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದು ಅವರಿಗೆ ಹೇಳಿದ್ದೆ.‌ ಆದರೆ ಅಲ್ಲಿ ಅವರಿಗೆ ಆ ಸ್ಥಾನ ತಪ್ಪಿದೆ.  ಇಬ್ರಾಹಿಂ ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ.‌ ಅವರು ಪಕ್ಷಕ್ಕೆ ಬಂದರೆ ಸ್ವಾಗತ.‌ ನಾವು ಕದ್ದುಮುಚ್ಚಿ ಯಾವುದನ್ನೂ ಮಾಡಿಲ್ಲ. ಇಂದೂ ಕೂಡ ನಾನು ಕರೆ ಮಾಡಿ ಮಾತಾಡಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸೂಕ್ತ ಸ್ಥಾನಮಾನ ಕೊಡುತ್ತೇವೆ ಎಂದು ಹೇಳಿದರು.

ಜನತಾ ಪರಿವಾರದ ನಾಯಕರು ಬೇರೆ ಬೇರೆ ಕಡೆ ಸೆಟಲ್  ಆಗಿದ್ದಾರೆ. ಅವರನ್ನು ವಾಪಸ್ ತರುವ ನಿರೀಕ್ಷೆ ಇಟ್ಟುಕೊಂಡಿಲ್ಲ. ಯುವ ನಾಯಕತ್ವ ತರುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹೊಸ ನಾಯಕರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಹೊಸ ನಾಯಕರ ಸೃಷ್ಟಿ ನಮ್ಮ ಆದ್ಯತೆ.  ಮೊದಲಿನಿಂದಲೂ ಜೆಡಿಎಸ್ ಗುರು ಮನೆ ಇದ್ದಂತೆ.  ಹಲವಾರು ಜನ ಇಲ್ಲಿಂದ ನಾಯಕರಾಗಿ‌ ಬೆಳೆದು ಹೋಗಿದ್ದಾರೆ ಎಂದು ತಿಳಿಸಿದರು.

ನೀರಾವರಿ ವಿಷಯಗಳ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ:

ನೀರಾವರಿ, ನದಿ ವಿಚಾರವಾಗಿ ರಾಜ್ಯದ ಜನರಿಗೆ ಎರಡು ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡಿರುವುದನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಬಹಳ ಅನ್ಯಾಯ ಆಗುತ್ತಿದೆ. ರಾಜ್ಯಪಾಲರ ಭಾಷಣದ ಮೇಲೆ ನಾನು ಸದನದಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ.

ನೀರಾವರಿ, ನದಿ ವಿಚಾರವಾಗಿ ರಾಜ್ಯದ ಜನರಿಗೆ ಎರಡು ರಾಷ್ಟ್ರೀಯ ಪಕ್ಷಗಳು  ಮೊಸ ಮಾಡಿವೆ. ಅದೆಲ್ಲವನ್ನೂ ಜನರ ಮುಂದೆ ಇಡುತ್ತೇನೆ.

ಜೆಡಿಎಸ್ ಪಕ್ಷ ಮುಗಿದೇ ಹೋಯಿತು ಎಂದು ಕೆಲವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾರ್ಯಕರ್ತರ ಶ್ರಮ ನಮ್ಮ ಪಕ್ಷಕ್ಕೆ ಇದೆ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಕಾರ್ಯಗತ ಆಗಬೇಕಾದರೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಮನದಟ್ಟು ಮಾಡಿಕೊಡುತ್ತವೆ. ಆ ನಿಟ್ಟಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ರೂಪಿಸಿದ್ದೇವೆ. ನಮ್ಮ ಪಕ್ಷದ ಯೋಜನೆಗಳನ್ನು ಜನರಿಗೆ ತಿಳಿಸುತ್ತೇವೆ. ಜನರ ವಿಶ್ವಾಸ ಗಳಿಸಲು ಎಲ್ಲ ಕ್ರಮ ವಹಿಸುತ್ತೇವೆ. ಈ ಬಗ್ಗೆ ಅನ್ಯ ಪಕ್ಷಗಳು ಮಾತನಾಡುವ ಅಗತ್ಯ ಇಲ್ಲ ಎಂದರು.

ಜೆಡಿಎಸ್ ಕೋರ್ ಕಮಿಟಿ ನೂತನ ಅಧ್ಯಕ್ಷ ಬಂಡೆಪ್ಪ ಖಾಶೆಂಪೂರ್ , ಶಾಸಕರಾದ ಮಂಜುನಾಥ್, ಕೃಷ್ಣಾರೆಡ್ಡಿ, ವಿಧಾನ‌ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.