ವಾಷಿಂಗ್ಟನ್: ರಷ್ಯಾ ಜೊತೆಗಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಮುಚ್ಚಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು “ಅಪಾಯಕಾರಿ ಪ್ರದೇಶಗಳು” ಎಂದು ಘೋಷಿಸಿದ್ದಾರೆ.
ಪೂರ್ವ ಉಕ್ರೇನ್‌ನ ವಾಯುಪ್ರದೇಶದಲ್ಲಿ ನಾಗರಿಕ ವಾಯು ಸಂಚಾರವನ್ನು ರಷ್ಯಾ ನಿಷೇಧಿಸಿದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ.
ರಷ್ಯಾದ ಕಡೆಯಿಂದ ಯುದ್ಧದ ಬೆದರಿಕೆ ಹೆಚ್ಚಾಗುತ್ತಿರುವಂತೆ ಉಕ್ರೇನ್ ನ ಅಧ್ಯಕ್ಷ ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ನಿನ್ನೆ ತಡರಾತ್ರಿ ದೇಶದ ಜನತೆಯನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿರುವ ಅವರು, ದೇಶವು ರಷ್ಯಾಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂಬ ರಷ್ಯಾ ಆರೋಪವನ್ನು ನಿರಾಕರಿಸಿದರು, ರಷ್ಯಾದ ಆಕ್ರಮಣವು ಹತ್ತಾರು ಸಾವಿರ ಜೀವಗಳನ್ನು ಕಳೆದುಕೊಳ್ಳುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ರಷ್ಯಾಕ್ಕೆ ಸಂದೇಶ ನೀಡಿದ ಅವರು, ಉಕ್ರೇನ್ ನ ಜನತೆ ಮತ್ತು ಸರ್ಕಾರ ಶಾಂತಿಯನ್ನು ಬಯಸುತ್ತಿದೆ, ಆದರೆ ದೇಶಕ್ಕೆ ದಾಳಿಯ ಧಕ್ಕೆಯುಂಟಾದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ, ನಮಗೆ ಆಗ ಯುದ್ಧ ಅನಿವಾರ್ಯವಾಗುತ್ತದೆ. ತಾವು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ, ಮೌನವಾಗಿದ್ದಾರೆ ಎಂದರು.