ಮನೆ ಅಪರಾಧ ತಂಪು ಪಾನಿಯದಲ್ಲಿ ಮದ್ಯ ಬೆರೆಸಿ, ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

ತಂಪು ಪಾನಿಯದಲ್ಲಿ ಮದ್ಯ ಬೆರೆಸಿ, ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಯ ಕೊಲೆಗೆ ಯತ್ನಿಸಿದ ಪತಿ

0

ಪಾಂಡವಪುರ : ಗಂಡನೇ ತನ್ನ ಹೆಂಡತಿಗೆ ತಂಪು ಪಾನಿಯದಲ್ಲಿ ಮಧ್ಯ ಬೆರಸಿ ಕಂಠಪೂರ್ತಿ ಕುಡಿಸಿ ಆಕೆಯ ಮೇಲೆ ಚಾಕು ಮತ್ತು ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಕೆನ್ನಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕೆನ್ನಾಳು ಗ್ರಾಮದ ನಿವೃತ್ತ ಅಧಿಕಾರಿ ವಿಶ್ವೇಶ್ವರಯ್ಯ ಅವರ ಪುತ್ರಿ ಕೆ.ವಿ.ಚಂಪಕ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಾಲಕೃಷ್ಣ ಪತ್ನಿ ಚಂಪಕ ಸತ್ತಿರಬಹುದು ಎಂದು ಆಕೆಯ ದೇಹವನ್ನು ರಸ್ತೆ ಬದಿಯಲ್ಲಿ ಬೀಸಾಡಿ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಾದ ಬಾಲಕೃಷ್ಣ ತಂದೆ ಕೆ.ಜೆ.ರಾಮಸ್ವಾಮಿ, ತಾಯಿ ಚಂದ್ರಕಲಾ ಸಹೋದರ

ಮಹೇಶ ಅವರೂ ಸಹ ತಮ್ಮ ಮನೆಗೆ ಬೀಗ ಜಡಿದು ತಲೆ ಮರೆಸಿಕೊಂಡಿದ್ದಾರೆ.

ಘಟನೆ ವಿವರ : ಆರೋಪಿ ಬಾಲಕೃಷ್ಣ ಮತ್ತು ಚಂಪಕ ಕಳೆದ ಒಂದು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿ ಕೆನ್ನಾಳು ಗ್ರಾಮದಲ್ಲೇ ವಾಸವಿದ್ದರು.

ಇತ್ತೀಚೆಗೆ ಇಬ್ಬರಲ್ಲೂ ಮನಸ್ತಾಪವಿತ್ತು. ಬಾಲಕೃಷ್ಣ ಪದೇ ಪದೇ ತನ್ನ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದನು. ಜತೆಗೆ ಹೆಂಡತಿ ಚಂಪಕ ಬಳಿ ಇದ್ದ ಚಿನ್ನದ ಒಡವೆಗಳನ್ನು ಗಿರವಿ ಇಟ್ಟಿದ್ದನು. ಈತನ ಎಲ್ಲ ಕುಕೃತ್ಯಕ್ಕೆ ಆತನ ತಂದೆ, ತಾಯಿ ಮತ್ತು ಸಹೋದರ ಬೆಂಬಲ ನೀಡುತ್ತಿದ್ದರು ಎಂದು ಚಂಪಕ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಮದ್ಯಾಹ್ನ ಬಾಲಕೃಷ್ಣ ತನ್ನ ಪತ್ನಿ ಚಂಪಕಳನ್ನು ಕಾರಿನಲ್ಲಿ ಹೊಳಲು ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತಂಪುಪಾನಿಯದಲ್ಲಿ ಮಧ್ಯ ಬೆರಸಿ ಕುಡಿಸಿದ್ದಾನೆ. ಆಕೆಗೆ ಮತ್ತು ಬಂದಾಗ ರಾಡಿನಿಂದ ಮತ್ತು ಚಾಕುವಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ದೇಹವನ್ನು ಕೆನ್ನಾಳು ಗ್ರಾಮದ ಈಶ್ವರ ದೇವಾಲಯದ ಬಳಿ ಬೀಸಾಡಿ ಹೊರಟು ಹೋಗಿದ್ದಾನೆ. ಬೆಳಿಗ್ಗೆ ದಾರಿಹೋಕರು ಮಹಿಳೆ ಚೀರಾಡುತ್ತಿರುವುದನ್ನು ಕಂಡು ಮನೆಯವರಿಗೆ ಸುದ್ದಿ ಮುಟ್ಟಿಸಿದರು ಎನ್ನಲಾಗಿದೆ.

ಸಧ್ಯ ಚಂಪಕ ಕೆ.ಆರ್.ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಪಾಂಡವಪುರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿಂದಿನ ಲೇಖನಹುಕ್ಕಾ-ಬಾರ್  ಮೇಲೆ ದಾಳಿ: ಅಪ್ರಾಪ್ತರನ್ನು ನೋಡಿ ದಂಗಾದ ಅಧಿಕಾರಿಗಳು
ಮುಂದಿನ ಲೇಖನಯುದ್ಧ ಭೀತಿ: ತುರ್ತು ಪರಿಸ್ಥಿತಿ ಘೋಷಿಸಿದ ಉಕ್ರೇನ್