ಮನೆ ರಾಜ್ಯ ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ : 209 ಅರ್ಜಿಗಳನ್ನು ಪರಿಶೀಲನೆ

ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ : 209 ಅರ್ಜಿಗಳನ್ನು ಪರಿಶೀಲನೆ

0

ಮೈಸೂರು(Mysuru): ಕಂದಾಯ, ಪಂಚಾಯಿತಿ, ಚೆಸ್ಕಾಂ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾದ 209 ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರವೇ ಬಗೆಹರಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಸೂಚಿಸಿದರು.

ಶನಿವಾರ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡು ಗ್ರಾಮಪಂಚಾಯಿತಿಯಲ್ಲಿ ಆಯೋಜಿಸಿದ್ದ `ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ 93 ಪಂಚಾಯಿತಿ ಸಂಬಂಧಿಸಿದಂತೆ 99, ಚೆಸ್ಕಾಂ ಸಂಬಂಧಿಸಿದಂತೆ 08, ಸರ್ವೇ ಸಂಬಂಧಿಸಿದಂತೆ 5, ಆರೋಗ್ಯ ಇಲಾಖೆಸಂಬಂಧಿಸಿದಂತೆ 02 ಸಮಾಜ ಕಲ್ಯಾಣ ಇಲಾಖೆ ಸಂಬಂಧಿಸಿದಂತೆ 1 ಹಾಗೂ ಕೆ.ಎಸ್.ಆರ್.ಟಿ.ಸಿ ಇಲಾಖೆ ಸಂಬಂಧಿಸಿದಂತೆ 1 ಒಟ್ಟು 209 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ಗ್ರಾಮವಾಸ್ತವ್ಯ ಹೊಸದೇನಲ್ಲ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವ ಕಾರ್ಯವನ್ನು ಬಹಳ ಹಿಂದಿನಿಂದಲೂ  ನಡೆಸಿಕೊಂಡು ಬರುತ್ತಿದ್ದೇನೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಈ ರೀತಿಯ ಕಾರ್ಯಕ್ರಮದಿಂದ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ ಎಂದರು.

ಗ್ರಾ.ಪಂ ಆವರಣದಿಂದ ವೇದಿಕೆಯವರೆಗೆ ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದರಿಂದ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಕಾಣುವುದಕ್ಕೆ ಸಾಧ್ಯವಾಯಿತು. ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ನಮ್ಮೊಂದಿಗಿದ್ದಾರೆ. ಸ್ವೀಕರಿಸಿರುವ ಅರ್ಜಿಗಳನ್ನು ಹದಿನೈದು ದಿನಗಳೊಳಗೆ ಬಗೆಹರಿಸಿಕೊಡಲಾಗುವುದು ಎಂಬ ವಿಶ್ವಾಸವ್ಯಕ್ತಪಡಿಸಿದರು.

ಮಾಕೋಡು ಗ್ರಾಮಸ್ಥರು ಶ್ರೀ ಬಸವೇಶ್ವರ ದೇವಸ್ಥಾನ ನಿರ್ವಹಣೆ, ಶ್ರೀ ಚನ್ನಕೇಶ್ವರ ದೇವಸ್ಥಾನ ಅಭಿವೃದ್ಧಿ ಬಗ್ಗೆ ಮನವಿ ಮಾಡಿದರು. ಉಳಿದಂತೆ ಜೈನ ಬಸದಿ ಕೌಂಪೌಂಡ್, ಶಾಲಾ ಒತ್ತುವರಿ ತೆರವು, 83 ಎಕರೆ ಗೋಮಾಳ ತೆರವು, ಗ್ರಂಥಾಲಯ ನಿರ್ಮಾಣ, ಮೆಟ್ಲಿಂಗ್ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ಮುಸ್ಲಿಂ ಸ್ಮಶಾನ ಅಭಿವೃದ್ಧಿ ಸೇರಿದಂತೆ ಗ್ರಾಮದ ಅಭಿವೃದ್ಧಿ ಕಾರ್ಯಗಳು ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಅರ್ಜಿ ಸಲ್ಲಿಸಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಮಾಕೋಡು ಗ್ರಾ.ಪಂ ಆವರಣದಿಂದ ವೇದಿಕೆಯವರೆಗೆ ಜಿಲ್ಲಾಧಿಕಾರಿಗಳನ್ನು ಕಳಸ ಹಾಗೂ ಸಾಂಸ್ಕೃತಿಕ ಕಲಾತಂಡದೊಂದಿಗೆ ಕರೆದೊಯ್ಯಲಾಯಿತು.

ಶಾಸಕರಾದ ಕೆ.ಮಹಾದೇವ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್ , ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.