ಮನೆ ಪೌರಾಣಿಕ ಮಂಕಣಕ

ಮಂಕಣಕ

0

ಹಿಂದೆ ಸಿದ್ಧ ಮಂಕಣಕನು ದರ್ಭೆಯ ಅಗ್ರಭಾಗವು ಕೈಗೆ ಚುಚ್ಚಿ ಗಾಯಗೊಂಡಾಗ ಅಲ್ಲಿಂದ ಶಾಕರಸವು ಸುರಿಯಿತು ಎಂದು ಕೇಳಿದ್ದೇವೆ. ಆ ಶಾಕರಸವನ್ನು ನೋಡಿದ ಮಂಕಣಕನು ಹರ್ಷಾವಿಷ್ಟನಾಗಿ ಕುಣಿದಾಡತೊಡಗಿದನು. ಅವನು ಕುಣಿಯುತ್ತಿದ್ದಾಗ ಅವನ ತೇಜಸ್ಸಿನಿಂದ ಮೋಹಗೊಂಡ ಸ್ಥಾವರ-ಜಂಗಮಗಳೆರಡೂ ಕುಣಿಯತೊಡಗಿದವು. ಬ್ರಹ್ಮನೇ ಮೊದಲ್ಗೊಂಡು ಸುರರು, ಶುಷಿಗಳು ಮತ್ತು ತಪೋಧನರು ಆ ಋಷಿಯ ಕುರಿತು ಮಹಾದೇವನಲ್ಲಿ “ದೇವ! ಇವನು ಕುಣಿಯದಂತೆ ಏನಾದರೂ ಮಾಡಬೇಕು!” ಎಂದು ವಿಜ್ಞಾಪಿಸಿಕೊಂಡರು.

ಸುರರ ಹಿತವನ್ನು ಬಯಸಿದ ದೇವ ಮಹಾದೇವನು ಅತೀವ ಹರ್ಷಾವಿಷ್ಟನಾಗಿದ್ದ ಮುನಿಯನ್ನು ನೋಡಿ ಕೇಳಿದನು: “ಭೋ! ಭೋ! ಬ್ರಾಹ್ಮಣ! ನೀನೇಕೆ ಹೀಗೆ ಕುಣಿಯುತ್ತಿರುವೆ? ಇಷ್ಟೊಂದು ಹರ್ಷಿತನಾಗಲು ಕಾರಣವೇನೆಂದು ಹೇಳು! ತಪಸ್ವಿಯಾದ ನೀನು ಧರ್ಮಪಥದಲ್ಲಿಯೇ ಇದ್ದೀಯೆ!”

ಋಷಿಯು ಹೇಳಿದನು: “ಬ್ರಹ್ಮನ್! ಕೈಯಿಂದ ಶಾಕರಸವು ಸುರಿಯುತ್ತಿರುವುದು ನಿನಗೆ ಕಾಣುತ್ತಿಲ್ಲವೇ? ಇದನ್ನು ನೋಡಿ ನಾನು ಮಹಾ ಹರ್ಷದಿಂದ ಕುಣಿಯುತ್ತಿದ್ದೇನೆ.”

ರಾಗದಿಂದ ಮೋಹಿತನಾಗಿದ್ದ ಆ ಮುನಿಗೆ ದೇವನು ನಗುತ್ತಾ “ವಿಪ್ರ! ನಾನು ಸ್ವಲ್ಪವೂ ವಿಸ್ಮಿತನಾಗಿಲ್ಲ. ನನ್ನನ್ನು ನೋಡು!” ಎಂದು ಹೇಳಿದನು.

ಮುನಿಶ್ರೇಷ್ಠನಿಗೆ ಹೀಗೆ ಹೇಳಿ ಧೀಮಂತ ಮಹಾದೇವನು ಬೆರಳಿನ ತುದಿಯಿಂದ ತನ್ನ ಎಡಗೈ ಹೆಬ್ಬೆರಳನ್ನು ಒತ್ತಿದನು. ಗಾಯಗೊಂಡ ಆ ಹೆಬ್ಬೆರಳಿನಿಂದ ಹಿಮಸದೃಶ ಭಸ್ಮವು ಹೊರಹೊಮ್ಮಿತು. ಅದನ್ನು ನೋಡಿ ಮುನಿಯು ನಾಚಿ ಮಹಾದೇವನ ಪಾದಗಳಿಗೆರಗಿದನು.

ಋಷಿಯು ಹೇಳಿದನು: “ರುದ್ರನಿಗಿಂತಲೂ ಅಧಿಕನಾದ ಬೇರೆ ಯಾವ ದೇವನನ್ನೂ ನಾನು ಮನ್ನಿಸುವುದಿಲ್ಲ. ಶೂಲಪಾಣೀ! ನೀನೇ ಸುರಾಸುರ ಜಗತ್ತಿನ ಗತಿ!  ನಿನ್ನಿಂದಲೇ ಈ ವಿಶ್ವವು ಸೃಷ್ಟಿಸಲ್ಪಟ್ಟಿದೆಯೆಂದು ಮನೀಷಿಗಳು ಹೇಳುತ್ತಾರೆ. ಪುನಃ ಯುಗಕ್ಷಯದಲ್ಲಿ ನೀನೇ ಎಲ್ಲವನ್ನೂ ನಿನ್ನೊಳಗೆ ಸೇರಿಸಿಕೊಳ್ಳುತ್ತೀಯೆ! ದೇವತೆಗಳಿಗೂ ನಿನ್ನನ್ನು ಅರಿತುಕೊಳ್ಳಲು ಸಾಧ್ಯವಾಗದಿರುವಾಗ ನಾನು ಹೇಗೆ ನಿನ್ನನ್ನು ಅರಿಯಬಲ್ಲೆ? ಬ್ರಹ್ಮಾದಿ ಸುರರೂ ಎಲ್ಲವೂ ನಿನ್ನಲ್ಲಿಯೇ ಕಾಣುತ್ತಿವೆ. ದೇವತೆಗಳ ಕರ್ತ ಮತ್ತು ಎಲ್ಲವನ್ನೂ ಮಾಡಿಸುವವನೂ ನೀನೇ ಆಗಿರುವೆ. ನಿನ್ನ ಪ್ರಸಾದದಿಂದಲೇ ಸುರರೆಲ್ಲರೂ ಭಯವೇ ಇಲ್ಲದವರಾಗಿ ಆನಂದಿಸುತ್ತಾರೆ.”

ಮಹಾದೇವನನ್ನು ಹೀಗೆ ಸ್ತುತಿಸಿ ನಮಸ್ಕರಿಸಿ ಆ ಋಷಿಯು “ಭಗವನ್! ನಿನ್ನ ಪ್ರಸಾದದಿಂದ ನನ್ನ ತಪಸ್ಸು ಕ್ಷಯವಾಗದಿರಲಿ!” ಎಂದು ಕೇಳಿಕೊಂಡನು. ಆಗ ಪ್ರೀತಮನಸ್ಕನಾದ ದೇವನು ಪುನಃ ಋಷಿಗೆ ಹೇಳಿದನು: “ವಿಪ್ರ! ನನ್ನ ಪ್ರಸಾದದಿಂದ ನಿನ್ನ ತಪಸ್ಸು ಸಾವಿರಪಟ್ಟು ವರ್ಧಿಸಲಿ. ಮತ್ತು ನಿನ್ನೊಡನೆ ನಾನೂ ಕೂಡ ಈ ಆಶ್ರಮದಲ್ಲಿ ಇದ್ದುಬಿಡುತ್ತೇನೆ! ಈ ಸಪ್ತಸಾರಸ್ವತದಲ್ಲಿ ನನ್ನನ್ನು ಅರ್ಚಿಸುವ ನರನಿಗೆ ಇಲ್ಲಿ ಅಥವ ನಂತರದಲ್ಲಿ ಯಾವುದೂ ದುರ್ಲಭವಾಗಲಾರದು. ಅವನು ಸಾರಸ್ವತ ಲೋಕಕ್ಕೆ ಹೋಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ!” ಇದು ಭೂರಿತೇಜಸ ಮಂಕಣಕನ ಚರಿತ್ರೆ. ಅವನೇ ವಾಯುವಿಗೆ ಸುಜನ್ಯೆಯಲ್ಲಿ ಹುಟ್ಟಿದ ಮಗ.