ಮನೆ ಸುದ್ದಿ ಜಾಲ ವಂಚನೆಯಿಂದ ಪಾರಾಗಲು ಕಾನೂನು ಹಕ್ಕಿನ ಅರಿವು ಅಗತ್ಯ: ರವೀಂದ್ರ ಸಿ.ಎಂ

ವಂಚನೆಯಿಂದ ಪಾರಾಗಲು ಕಾನೂನು ಹಕ್ಕಿನ ಅರಿವು ಅಗತ್ಯ: ರವೀಂದ್ರ ಸಿ.ಎಂ

0

ಮೈಸೂರು(Mysuru): ಪ್ರತಿಯೊಬ್ಬ ಗ್ರಾಹಕನು ಸಹ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಹೊಂದಿದಾಗ ಮಾತ್ರ ವಂಚನೆಯಿಂದ ಹೊರಬರಲು ಸಾಧ್ಯ ಎಂದು ಸರಸ್ವತಿಪುರಂ ಪೊಲೀಸ್ ಠಾಣೆ ನಿರೀಕ್ಷಕರಾದ ರವೀಂದ್ರ ಸಿ ಎಂ ಅಭಿಪ್ರಾಯಪಟ್ಟರು.

ಸರಸ್ವತಿಪುರಂನಲ್ಲಿರುವ ಟಿ.ಟಿ.ಎಲ್ ಕಾಲೇಜ್ ಆವರಣದಲ್ಲಿ ಟಿ.ಟಿ.ಎಲ್ ಟ್ರಸ್ಟ್ ಮತ್ತು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಟಿ.ಟಿ.ಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು ಮತ್ತು ಟಿ .ಟಿ. ಎಲ್ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಅಂಗವಾಗಿ ಗ್ರಾಹಕ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ  ಪ್ರತಿಯೊಬ್ಬ ಗ್ರಾಹಕರ ರಕ್ಷಣೆಯನ್ನು ಹಿತದೃಷ್ಟಿಯಲ್ಲಿಟ್ಟು ಕೊಂಡು 1984ರಲ್ಲಿ ಗ್ರಾಹಕ ಕಾಯಿದೆ ಜಾರಿಗೆ ತಂದಿದೆ.  ಪ್ರತಿಯೊಬ್ಬ ಗ್ರಾಹಕನು ವಸ್ತು ಮತ್ತು ಸೇವೆಗಳನ್ನು ನೋಂದಾಯಿತ ವ್ಯಕ್ತಿ ಅಥವಾ ಸಂಸ್ಥೆಯಿಂದ ಪಡೆಯಬೇಕು. ಅನ್ಯಾಯ ಕಂಡು ಬಂದಲ್ಲಿ ಕಾನೂನಾತ್ಮಕವಾಗಿ ಕನ್ಸ್ಯೂಮರ್ ಕೋರ್ಟ್ ಗೆ ತೆರಳಿ  ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ನಾಗರೀಕ ಸಮಾಜದಲ್ಲಿ ತನಗೆ ಬೇಕಾದ ಮಾಹಿತಿ ಪಡೆಯಲು ಮತ್ತು ಪ್ರಶ್ನೆ ಕೇಳಲು ಸ್ವತಂತ್ರವಿದೆ. ಕಾನೂನಾತ್ಮಕವಾಗಿ ಮಾಹಿತಿ ಹಕ್ಕಿನಲ್ಲಿದೆ ಆದರೆ ಅದನ್ನ ಕೆಲವರು ಸ್ವತಃ ಆರ್.ಟಿ.ಐ ಕಾರ್ಯಕರ್ತ ಎಂದು ವೈಭವಿಕರಿಸುವುದು ಸರಿಯಲ್ಲ, ಸೈಬರ್‌ ಅಪರಾಧಗಳಿಂದ ಎಚ್ಚರ ವಹಿಸಿ’ ಅನಾಮಧೇಯ ವ್ಯಕ್ತಿಗಳು ಮೊಬೈಲ್‌’ಗೆ ಕರೆ ಮಾಡಿ ಓಟಿಪಿ ಹಾಗೂ ಇತರೆ ಸಂದೇಶಗಳನ್ನು ಕಳಿಸಿ ಬ್ಯಾಂಕ್‌ ಖಾತೆಯಿಂದ ಹಣ ದೋಚುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಸಾರ್ವಜನಿಕರು ಅನಾಮಧೇಯ ಕರೆ ಹಾಗೂ ಸಂದೇಶಗಳಿಂದ ಎಚ್ಚರ ವಹಿಸಬೇಕು ಎಂದರು.

ಮಹಿಳೆಯರು ಆಭರಣ ಧರಿಸಿ ತಿರುಗಾಡುವಾಗ ಜಾಗೃತಿಯಿಂದಿರಬೇಕು. ಪ್ರತಿಯೊಬ್ಬರು ಮೋಟಾರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು, ಜೀವ ಉಳಿಸಿಕೊಳ್ಳಲು ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಟಿ.ಟಿ.ಎಲ್ ಟ್ರಸ್ಟ್ ನ ಆಡಳಿತ ಮತ್ತು ನಿಯೋಜನ ಅಧಿಕಾರಿ ಡಾ. ಬಿ ವಿ ಪ್ರಶಾಂತ್ ಗ್ರಾಹಕರು ಮಾರುಕಟ್ಟೆಯಲ್ಲಿ ವಸ್ತು ಗಳನ್ನು ಖರೀದಿಸುವಾಗ ಕೂಲಂಕಶವಾಗಿ ಗುಣಮಟ್ಟ ಧರ ಮೌಲ್ಯತೆ ಪರಿಶೀಲಿಸಿ ಖರೀದಿಸಬೇಕು ಎಂದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಅಧ್ಯಕ್ಷರಾದ ಡಾ ಜಿ ವಿ ರವಿಶಂಕರ್ ಮಾತನಾಡಿ,  ವೇದಿಕೆಗೆ ಗ್ರಾಹಕರು ದೂರು ಸಲ್ಲಿಸಿ 3 ರಿಂದ 6 ತಿಂಗಳೊಳಗಾಗಿ ಪರಿಹಾರ ಕಂಡುಕೊಳ್ಳಬಹುದು.  ದೂರು ಸಲ್ಲಿಸುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳು ನ್ಯಾಯಯುತವಾಗಿರಬೇಕು  ಮತ್ತು ರೂ. 100 ಡಿ.ಡಿ. ತೆಗೆದು ದೂರು ಸಲ್ಲಿಸಬೇಕು ಎಂದರು.      

ಇದೇ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಎಸ್.ಆರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಭ್ರಮರಾಂಬ ಡಾ. ಎಸ್. ಗೀತಾ, ಕಾಲೇಜಿನ ರೆಡ್ ಕ್ರಾಸ್ ಅಧಿಕಾರಿ ಗಿರೀಶ್ ಹಾಗೂ ಇನ್ನಿತರರು ಹಾಜರಿದ್ದರು.