ಮನೆ Uncategorized ಮೇಕೆದಾಟು ಪಾದಯಾತ್ರೆ: ಚಲನಚಿತ್ರ ಕಲಾವಿದರ ಬೆಂಬಲಕ್ಕೆ ಕಾಂಗ್ರೆಸ್ ಮನವಿ

ಮೇಕೆದಾಟು ಪಾದಯಾತ್ರೆ: ಚಲನಚಿತ್ರ ಕಲಾವಿದರ ಬೆಂಬಲಕ್ಕೆ ಕಾಂಗ್ರೆಸ್ ಮನವಿ

0

ನವದೆಹಲಿ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಇದೇ 27ರಂದು ಕಾಂಗ್ರೆಸ್ ಪಕ್ಷ ರಾಮನಗರದಿಂದ ಆರಂಭಿಸಲಿರುವ ಪಾದಯಾತ್ರೆಯಲ್ಲಿ ಕನ್ನಡ ಚಲನಚಿತ್ರ ಕಲಾವಿದರು, ಕನ್ನಡ‌ಪರ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ಮನವಿ ಮಾಡಿದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ‌ ಶೇ 25ರಷ್ಟು ಜನತೆಗೆ ಕುಡಿಯುವ ನೀರು ಪೂರೈಸಲು ಮತ್ತು 400 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆಗೆ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಕೋರಿದರು.

ಮೇಕೆದಾಟು ಯೋಜನೆಯಿಂದ 67 ಟಿಎಂಸಿ ಅಡಿ ನೀರನ್ನು ಸಮಾನಾಂತರ ಜಲಾಶಯದಲ್ಲಿ ಸಂಗ್ರಹಿಸಲಾಗುವುದು. ಇದರಿಂದ ಬೇಸಿಗೆಯಲ್ಲಿ ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‌ಎಸ್ ಜಲಾಶಯಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಫೆಬ್ರುವರಿ 27ರಂದು ಬೆಳಿಗ್ಗೆ 9ಕ್ಕೆ ರಾಮನಗರದಿಂದ ಆರಂಭ ಆಗಲಿರುವ ಪಾದಯಾತ್ರೆ ಬಿಡದಿ, ಕೆಂಗೇರಿ ಮೂಲಕ ಬೆಂಗಳೂರು ತಲುಪಲಿದೆ. ನಂತರ ಮಾರ್ಚ್ 3ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಸುವ ಮೂಲಕ ಅಂತ್ಯಗೊಳ್ಳಲಿದೆ ಎಂದು ಅವರು ತಿಳಿಸಿದರು.