ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಕೆರೆ ತೊಣ್ಣೂರು ಪುರಾಣ ಪ್ರಸಿದ್ಧ ಗ್ರಾಮ. ಸ್ಥಳ ಪುರಾಣದ ಪ್ರಕಾರ, ಈ ಊರಿನ ಮೂಲ ಹೆಸರು ತೊಂಡನೂರು ಅಂದರೆ ಭಕ್ತರ ಅಥವಾ ದಾಸರ ಊರು ಎಂದು. ಕಾಲಾನಂತರದಲ್ಲಿ ತೊಂಡನೂರು ತೊಣ್ಣೂರಾಗಿದೆ. ಈ ಊರಿನಲ್ಲಿರುವ ಭವ್ಯವಾದ ಕೆರೆಯಿಂದಾಗಿ ಊರು ಕೆರೆ ತೊಣ್ಣೂರು ಎಂದೂ ಕರೆಸಿಕೊಂಡಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಯಾದವಸಮುದ್ರವೇ ಈ ಕೆರೆ ಎಂದೂ ಹೇಳುತ್ತಾರೆ. ಯಾದವಗಿರಿ ಅಥವಾ ಯದುಗಿರಿ ಅಂದರೆ ಈಗಿನ ಮೇಲುಕೋಟೆಯಲ್ಲಿದ್ದ ಶ್ರೀಕೃಷ್ಣ ಪರಮಾತ್ಮ ಈ ಕೆರೆಯಲ್ಲಿ ಗೋಪಿಕಾಸ್ತ್ರೀಯರೊಂದಿಗೆ ಜಲಕ್ರೀಡೆಯಾಡುತ್ತಿದ್ದನಂತೆ. ಹೀಗಾಗಿ ಈ ಕೆರೆಗೆ ಪಂಚ ಅಪ್ಸರ ತಟಾಕ ಎಂಬ ಹೆಸರೂ ಇದೆ. ಹೀಗಾಗಿಯೇ ಈ ಊರಿನಲ್ಲಿ 12 ವರ್ಷಗಳ ಕಾಲ ತಪವನ್ನಾಚರಿಸಿದ್ದ ಶ್ರೀ. ರಾಮಾನುಜಾಚಾರ್ಯರು ಎರಡು ಬೆಟ್ಟಗಳ ನಡುವೆ ಕಟ್ಟೆ ಕಟ್ಟಿಸಿ ಈ ಕೆರೆಯನ್ನು ಜೀರ್ಣೋದ್ಧಾರ ಮಾಡಿದರೆಂದೂ, ಬೆಟ್ಟಗಳ ಸಾಲುಗಳ ಮಧ್ಯೆ 300 ಅಡಿ ಆಳ ಹಾಗೂ ವಿಶಾಲವಾಗಿ ಹಬ್ಬಿರುವ ಕೆರೆ ನಿರ್ಮಾಣವಾದ ದಿನದಿಂದ ಇಂದಿನವರೆಗೂ ಬತ್ತಿಲ್ಲವೆಂದೂ, ಈ ಕೆರೆಯ ಒಳಗೆ ಪುರಾತನವಾದ ಚಿನ್ನದ ಕಳಶ ಇರುವ ದೇವಾಲಯವಿತ್ತೆಂದೂ ಹೇಳಲಾಗುತ್ತದೆ.
ಈ ಊರಿನಲ್ಲಿ ಹಲವು ಪುರಾತನ ದೇವಾಲಯಗಳಿದ್ದು, ಅವುಗಳ ಪೈಕಿ ಪಾರ್ಥ ಸಾರಥಿಯ ದೇವಾಲಯವೂ ಒಂದು. ದ್ವಾಪರ ಯುಗದಲ್ಲಿ ಪಾಂಡವರಲ್ಲಿ ಹಿರಿಯನಾದ ಧರ್ಮರಾಯನು, ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಸಾರಥಿಯಾಗಿ, ಗೀತೋಪದೇಶ ಮಾಡಿದ ಪಾರ್ಥಸಾರಥಿಗೆ ಕೃತಜ್ಞತೆ ಅರ್ಪಿಸಲು ಪವಿತ್ರವಾದ ಯದುಗಿರಿಯ ಪಕ್ಕದಲ್ಲಿ ಈ ದೇವರನ್ನು ಪ್ರತಿಷ್ಠಾಪನೆ ಮಾಡಿದನೆಂದೂ. ಪಕ್ಕದಲ್ಲೇ ಕುಂತಿ ಬೆಟ್ಟ ಮತ್ತು ಪಾಂಡವರಿದ್ದ ಪುರ – ಪಾಂಡವಪುರ ಇರುವುದೇ ಇದಕ್ಕೆ ಸಾಕ್ಷಿ ಎಂದೂ ಊರ ಹಿರಿಯರು ಹೇಳುತ್ತಾರೆ.
ಹೊಯ್ಸಳರ ದೊರೆ ಒಂದನೆಯ ನರಸಿಂಹನ ಕಾಲದಲ್ಲಿ ಈ ಪಾರ್ಥಸಾರಥಿಯ ದೇವಾಲಯ ಹಾಗೂ ಊರಿನಲ್ಲಿರುವ ಕೈಲಾಸೇಶ್ವರ ದೇವಾಲಯವನ್ನು ನಿರ್ಮಿಸಲಾಗಿತ್ತು, ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯ ವಿಸ್ತರಿಸಲಾಗಿದೆ ಎಂದೂ ಹೇಳಲಾಗುತ್ತದೆ.
ಪಾರ್ಥಸಾರಥಿಯ ದೇವಾಲಯದ ಉನ್ನತವಾದ ಪ್ರಾಕಾರದ ಆಚೆ ಬೇರೆಯಾಗಿ ದೊಡ್ಡದಾದ ಪ್ರವೇಶದ್ವಾರವೊಂದಿದೆ. ವೀರಬಲ್ಲಾಳನ ಕಾಲದಲ್ಲಿ ನಿರ್ಮಿಸಲಾದ ಗೋಪುರಕ್ಕೆ ವೀರಬಲ್ಲಾಳ ಗೋಪುರ ಎಂದೇ ಕರೆಯುತ್ತಾರೆ. ನಂಬಿ ನಾರಾಯಣ ದೇವಾಲಯದ ಎದುರು ಇರುವ ಈ ದೇವಾಲಯ ಸಾಧಾರಣ ಕಲ್ಲಿನಿಂದ ಕೋಟೆಯಂತೆ ನಿರ್ಮಿಸಿದ್ದಾಗಿದ್ದು, ಹೊಯ್ಸಳರ ಕಾಲದ ನಿರ್ಮಾಣವಾದರೂ ಸೂಕ್ಷ್ಮ ಕೆತ್ತನೆಗಳು ಇಲ್ಲಿ ಕಾಣಸಿಗುವುದಿಲ್ಲ. ಆದರೆ ಎತ್ತರವಾದ ಪ್ರವೇಶದ್ವಾರದ ಎಡ ಬಲದಲ್ಲಿರುವ ಬೃಹತ್ ಕಂಬಗಳಲ್ಲಿ ವೈಕುಂಠದ ದ್ವಾರಪಾಲಕರಾದ ಜಯವಿಜಯರ ಉಬ್ಬ ಶಿಲ್ಪವಿದೆ ಮತ್ತು ದ್ವಾರ ಕೆತ್ತನೆಗಳಿವೆ. ಮೇಲ್ಭಾಗದಲ್ಲಿ ಗಾರೆಗಚ್ಚಿನ ಗೋಪುವಿದೆ. ಎಡಭಾಗದಲ್ಲಿರುವ ಒಂದು ಪ್ರತ್ಯೇಕ ಶಿಲೆಯಲ್ಲಿ ಹಲಾಯುಧದ ಕೆತ್ತನೆಯಿದೆ.
ವೇಣುಗೋಪಾಲ ಸ್ವಾಮಿ ದೇವಾಲಯ ಎಂದೂ ಕರೆಯಲಾಗುವ ಈ ಮಂದಿರ, ಸುಖನಾಸಿ, ನವರಂಗ, ಮುಖಮಂಟಪ ಮತ್ತು ಗರ್ಭಗೃಹವನ್ನೊಳಗೊಂಡಿದೆ. ಪ್ರಧಾನಗರ್ಭಗೃಹದಲ್ಲಿ ಸುಖಾಸೀನನಾದ ಶಂಖಚಕ್ರಧಾರಿ ಶ್ರೀಕೃಷ್ಣ ಅಥವಾ ಪಾರ್ಥಸಾರಥಿಯ ದೊಡ್ಡ ಮೂರ್ತಿಯಿದ್ದು, ಎಡಬಲಗಳಲ್ಲಿ ನಿಂತಿರುವ ರುಕ್ಮಿಣಿ ಸತ್ಯಭಾಮೆಯರ ಮೂರ್ತಿಗಳಿವೆ. ದೇವರ ಮುಂದೆ ವೇಣುಗೋಪಾಲ ರುಕ್ಮಿಣಿ ಸತ್ಯಭಾಮೆಯರ ಲೋಹದ ಉತ್ಸವ ಮೂರ್ತಿಗಳನ್ನಿಡಲಾಗಿದ್ದು, ಅವೂ ಆಕರ್ಷಕವಾಗಿವೆ. ಲೋಹದ ಪ್ರತಿಮೆಗಳನ್ನು ವಿಜಯನಗರದರಸರ ಕಾಲದಲ್ಲಿ ಮಾಡಿಸಿದ್ದೆಂದು ಹೇಳಲಾಗುತ್ತದೆ. ಮುಖಮಂಟಪದಲ್ಲಿ ಕನ್ನಡ ಮತ್ತು ತಮಿಳಿನ ಶಾಸನಗಳಿವೆ. ದೇವಾಲಯದ ಒಳ ಪ್ರಾಕಾರದಲ್ಲಿ ಅರವಿಂದ ನಾಯಕಿ ವಿಗ್ರಹವೂ ಇದೆ. ದೇವಾಲಯದ ಹೊರಗೆ ಒಂದು ಕಲ್ಲಿನ ಮಂಟಪವಿದ್ದು, ಉಯ್ಯಾಲೆ ಉತ್ಸವಕ್ಕೆ ಈ ಮಂಟಪ ಬಳಸಲಾಗುತ್ತಿತ್ತು ಎನ್ನಲಾಗಿದೆ. ಇಲ್ಲಿ ವೈಖಾನಸಾಗಮ ರೀತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆ.