ಹೊಸದಿಲ್ಲಿ: ಅನ್ಯ ಉದ್ದೇಶಗಳಿಗೆ ಆಧಾರ್ ಕಾರ್ಡ್ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸುವಂತೆ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ದೇಶದ ನಾಗರಿಕರಿಗೆ ಸೂಚನೆ ನೀಡಿದೆ.
ಸರಕಾರದ ಹಲವು ಸೌಲಭ್ಯ ಪಡೆಯುವ ಜತೆಗೆ ಬೇರೆ ಬೇರೆ ಸೇವೆ ಹಾಗೂ ಸೌಕರ್ಯ ಪಡೆದುಕೊಳ್ಳಲು ನಾಗರಿಕರು ಆಧಾರ್ ಕಾರ್ಡ್ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸುವಂತೆ ಎಚ್ಚರಿಸಿದೆ.
ಆಧಾರ್ ಸಂಖ್ಯೆ ನೀಡುವಾಗ ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ ಎಂಬುದನ್ನು ಖಾತರಿ ಮಾಡಿಕೊಳ್ಳಿ. ಜತೆಗೆ ಬ್ಯಾಂಕ್ ಅಕೌಂಟ್, ಮೊಬೈಲ್ ನಂಬರ್, ರೇಷನ್ ಕಾರ್ಡ್, ಪ್ಯಾನ್, ಪಾಸ್ಪೋರ್ಟ್’ನಂತಹ ದಾಖಲೆಗಳನ್ನು ಆಧಾರ್ ಜತೆ ನೀಡಬೇಡಿ ಎಂದು ಪ್ರಾಧಿಕಾರ ಎಚ್ಚರಿಕೆಯ ಸಂದೇಶ ನೀಡಿದೆ.
ತಮ್ಮ ಆಧಾರ್ ಪತ್ರ, ಪಿವಿಸಿ ಕಾರ್ಡ್ ಅಥವಾ ಪ್ರತಿಯನ್ನು ವಿಲೇವಾರಿ ಮಾಡದೆ ಬಿಡಬಾರದು. ಯಾವುದೇ ಅನಧಿಕೃತ ಸಂಸ್ಥೆ, ವ್ಯಕ್ತಿಗೆ ಆಧಾರ್ ಒಟಿಪಿ (ಒನ್ ಟೈಂ ಪಾಸ್ವರ್ಡ್) ಅನ್ನು ನೀಡಬಾರದು. ಹಾಗೆಯೇ ಎಂ- ಆಧಾರ್ ಪಿನ್ ಅನ್ನು ಕೂಡ ಯಾರ ಜತೆಗೂ ಹಂಚಿಕೊಳ್ಳಬಾರದು.
ಆಧಾರ್ ಸಂಖ್ಯೆ ನೀಡಲು ಇಚ್ಛಿಸದವರು ‘ವರ್ಚುವಲ್ ಐಡಿ’ ಸಂಖ್ಯೆ ಸೃಷ್ಟಿಸಿ ಆಧಾರ್ ಬಳಕೆ ಮಾಡಬಹುದು. ವರ್ಚುವಲ್ ಐಡಿಯನ್ನು ಆಧಾರ್ ವೆಬ್ಸೈಟ್ ಅಥವಾ ‘ಮೈ ಆಧಾರ್’ ಪೋರ್ಟಲ್’ನಲ್ಲಿ ಪಡೆದುಕೊಂಡು ನಿಮ್ಮ ಗುರುತಿನ ದೃಢೀಕರಣ ಮಾಡಬಹುದು ಎಂದು ಪ್ರಾಧಿಕಾರ ಸಲಹೆ ನೀಡಿದೆ.
ಪ್ರತಿ ಆರು ತಿಂಗಳಿಗೆ ಒಮ್ಮೆ ನಾಗರಿಕರು ತಮ್ಮ ಆಧಾರ್ ಕಾರ್ಡ್’ನ ದೃಢೀಕರಣ ಇತಿಹಾಸದ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಇದರಿಂದ ಯಾವ ಉದ್ದೇಶಕ್ಕೆ ಯಾವ ಸಂಸ್ಥೆಗಳಿಗೆ ಆಧಾರ್ ಸಂಖ್ಯೆ ನೀಡಲಾಗಿದೆ. ಯಾವೆಲ್ಲ ಉಪಯೋಗ ಪಡೆದುಕೊಳ್ಳಲಾಗಿದೆ ಎಂಬ ಅರಿವು ಮೂಡಲಿದೆ. ಆಕಸ್ಮಿಕವಾಗಿ ಆಧಾರ್ ಸಂಖ್ಯೆ ನಿಮಗೆ ಗೊತ್ತಿಲ್ಲದೆ ಎಲ್ಲಾದರೂ ಬಳಕೆಯಾಗಿದೆಯೇ ಎಂಬ ಮಾಹಿತಿ ಗಮನಕ್ಕೆ ಬರಲಿದೆ ಎಂದು ಪ್ರಾಧಿಕಾರ ಹೇಳಿದೆ.
ಅನಧಿಕೃತವಾಗಿ ನಿಮ್ಮ ಆಧಾರ್ ಸಂಖ್ಯೆ ಎಲ್ಲಾದರೂ ಸಂಶಯಾಸ್ಪದವಾಗಿ ಬಳಕೆ ಆಗುತ್ತಿರುವ ಮಾಹಿತಿ ಕಂಡು ಬಂದಲ್ಲಿ ಆಧಾರ್ ಹೆಲ್ಪ್’ಲೈನ್ ನಂಬರ್ 1947 ಗೆ ಕರೆ ಮಾಡಬೇಕು ಎಂದು ಪ್ರಾಧಿಕಾರ ತಿಳಿಸಿದೆ.