ಮನೆ ಪ್ರವಾಸ ಸಕಲೇಶಪುರದ ಜನಪ್ರಿಯ ಪ್ರವಾಸಿ ಸ್ಥಳಗಳ ಮಾಹಿತಿ ಇಲ್ಲಿದೆ

ಸಕಲೇಶಪುರದ ಜನಪ್ರಿಯ ಪ್ರವಾಸಿ ಸ್ಥಳಗಳ ಮಾಹಿತಿ ಇಲ್ಲಿದೆ

0

ಕರ್ನಾಟಕದ ಪುಟ್ಟ ಗಿರಿಧಾಮವಾಗಿರುವ ಸಕಲೇಶಪುರವು ಶ್ರೀಮಂತ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಸಮೃದ್ಧವಾಗಿ ಬೆಳೆದ ಕಾಫಿ ತೋಟಗಳು ಬೆಕ್ಕಸ ಬೆರಗಾಗುವಂತೆ ಮಾಡುತ್ತವೆ. ಸಕಲೇಶಪುರವು ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದೆ.

ವಾಸ್ತವವಾಗಿ, ಕರ್ನಾಟಕದ ರೋಮ್ಯಾಂಟಿಕ್ ತಾಣಗಳ ಪಟ್ಟಿಯಲ್ಲಿ ಸಕಲೇಶಪುರವು ಸೇರ್ಪಡೆಗೊಂಡಿದೆ. ಇಲ್ಲಿ ನೀವು ಭವ್ಯವಾದ ಕೋಟೆಗಳು, ಐತಿಹಾಸಿಕ ದೇವಾಲಯಗಳು, ಹಾಲ್ನೊರೆಯಂತೆ ಧರೆಗೆ ಬೀಳುವ ಜಲಧಾರೆಗಳನ್ನು ವೀಕ್ಷಿಸಬಹುದು. ಸಕಲೇಶಪುರದ ಜನಪ್ರಿಯ ಪ್ರವಾಸಿ ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

ಹಡ್ಲು ಜಲಪಾತ

ಸಕಲೇಶಪುರದಲ್ಲಿರುವ ಸುಂದರವಾದ ಜಲಪಾತಗಳಲ್ಲಿ ಈ ಹಡ್ಲು ಜಲಪಾತವು ಒಂದು. ಜಲಪಾತವು ಶ್ರೀಮಂತ ಪ್ರಾಕೃತಿಕ ಸೌಂದರ್ಯದ ನಡುವೆ ಗುಪ್ತ ರತ್ನವಾಗಿ ಅಡಗಿದೆ. ನೀವು ಜಲಪಾತ ಮತ್ತು ಟ್ರೆಕ್ಕಿಂಗ್ಗಳನ್ನು ಒಂದೇ ಸೂರಿನಡಿ ಕೈಗೊಳ್ಳಲು ಬಯಸಿದರೆ ಈ ಹಡ್ಲು ಜಲಪಾತವನ್ನು ಆಯ್ಕೆ ಮಾಡಿಕೊಳ್ಳಿ. ರಮಣೀಯವಾದ ತಾಣದಲ್ಲಿ ಪ್ರಕೃತಿ ಚಾರಣವನ್ನು ನೀವು ಎಂಜಾಯ್ ಮಾಡಬಹುದು. ನಿಮಗೆ ಸಂತಸ ನೀಡುವ ಮತ್ತೊಂದು ಸಂಗತಿ ಏನೆಂದರೆ ಇಲ್ಲಿನ ತಂಪಾದ ನೀರಿನಲ್ಲಿ ಸ್ನಾನ ಮಾಡಬಹುದು.

ಮೂಕನ ಮನೆ ಜಲಪಾತ

ಸಕಲೇಶಪುರದ ಈ ಮೂಕನ ಮನೆ ಜಲಪಾತವು ನಿಜಕ್ಕೂ ಮೂಕವಿಸ್ಮಿತರನ್ನಾಗಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಜಲಪಾತಕ್ಕೆ ನೀವು ಟ್ರೆಕ್ಕಿಂಗ್ ಮೂಲಕ ತಲುಪಬಹುದು. ದಟ್ಟವಾದ ಕಾಡಿನ ಮಧ್ಯೆ ಜುಳು ಜುಳು ನಿನಾದವನ್ನು ಮಾಡುತ್ತಾ ಜಲಪಾತವು ಹರಿಯುತ್ತದೆ. ಒಟ್ಟಾರೆ ಜಲಪಾತದ ವಾತಾವರಣವು ಮನಸ್ಸು ಮತ್ತು ಶರೀರಕ್ಕೆ ಉಲ್ಲಾಸವನ್ನು ನೀಡುತ್ತದೆ. ಸಕಲೇಶಪುರದಿಂದ 41 ಕಿ.ಮೀ ದೂರದಲ್ಲಿರುವ ಈ ಮೂಕನ ಮನೆ ಜಲಪಾತದ ಸೌಂದರ್ಯವನ್ನು ಮಳೆಗಾಲದಲ್ಲಿಯೇ ನೋಡಬೇಕು.

ಮಂಜೇಹಳ್ಳಿ ಜಲಪಾತ

ಈ ಮಂಜೇಹಳ್ಳಿ ಜಲಪಾತವನ್ನು ಅಬ್ಬಿ ಜಲಪಾತವೆಂದು ಕೂಡ ಕರೆಯಲಾಗುತ್ತದೆ. ಸಕಲೇಶಪುರದ ಸುಂದರವಾದ ಜಲಪಾತಗಳಲ್ಲಿ ಈ ಜಲಪಾತವು ಒಂದು. ಸುತ್ತಲೂ ಹಚ್ಚ ಹಸಿರು ಮಧ್ಯದಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ ಆಹಾ…! ನೋಡಲು ಎರಡು ಕಣ್ಣುಗಳೇ ಸಾಲವು. ಜಲಪಾತವು ಸುಮಾರು 20 ಅಡಿ ಎತ್ತರದಿಂದ ಬೀಳುತ್ತದೆ. ವಾಸ್ತವವಾಗಿ, ಜಲಪಾತದ ನಿಜವಾದ ಸೌಂದರ್ಯ ಇಮ್ಮಡಿಯಾಗುವುದು ಮಳೆಗಾಲದಲ್ಲಿ. ಹಾಗಾಗಿ ಮಳೆಗಾಲದಲ್ಲಿ ಪ್ರವಾಸ ಮಾಡಲು ಯೋಜಿಸಿ.

ಮಂಜರಾಬಾದ್ ಕೋಟೆ

ಸಕಲೇಶಪುರದಿಂದ ಕೇವಲ 5 ಕಿ.ಮೀ ದೂರದಲ್ಲಿ ಒಂದು ಐತಿಹಾಸಿಕ ಕೋಟೆ ಇದೆ. ಅದರ ಹೆಸರು ಮಂಜರಾಬಾದ್ ಕೋಟೆಯಾಗಿದೆ. ಪ್ರಕೃತಿಯಿಂದ ಆಶೀರ್ವದಿಸಲ್ಪಟ್ಟಿರುವ ಜಾಗದಲ್ಲಿ ಈ ಕೋಟೆ ನೆಲೆಸಿದ್ದು, ಟಿಪ್ಪು ಸುಲ್ತಾನ್ 1785 ರಿಂದ 1792 ರ ನಡುವೆ ನಿರ್ಮಿಸಿದನು ಎನ್ನಲಾಗಿದೆ. ಎರಡು ಹಂತದ ಈ ಸುಂದರವಾದ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಿದ್ದಾರೆ. ಸುಮಾರು 250 ಮೆಟ್ಟಿಲುಗಳನ್ನು ಹೊಂದಿರುವ ಈ ಕೋಟೆಯು ಸಮುದ್ರಮಟ್ಟದಿಂದ 3240 ಅಡಿ ಎತ್ತರದಲ್ಲಿ ನೆಲೆಸಿದೆ. ನಕ್ಷತ್ರಾಕಾರದ ಕೋಟೆಯನ್ನು ನೀವು ಎಂದಿಗೂ ಮಿಸ್ ಮಾಡ್ಕೋಬಾರದು.

ಸಕಲೇಶ್ವರ ಸ್ವಾಮಿ ದೇವಾಲಯ

ಸಕಲೇಶಪುರದ ಪ್ರಮುಖ ಆಧ್ಯಾತ್ಮಿಕ ತಾಣವಾಗಿರುವ ಸಕಲೇಶ್ವರ ಸ್ವಾಮಿ ದೇವಾಲಯಕ್ಕೆ ನೀವು ಭೇಟಿ ನೀಡಲೇಬೇಕು. ಇದು ಸಕಲೇಶಪುರದಿಂದ ಕೇವಲ ಒಂದೂವರೆ ಕಿ.ಮೀ ದೂರದಲ್ಲಿದೆ. ಇದೊಂದು ಹಳೆಯ ದೇವಾಲಯವಾಗಿದ್ದು, ಸಕಲೇಶಪುರದ ಪ್ರವಾಸದಲ್ಲಿ ಮಿಸ್ ಮಾಡಬಾರದ ತಾಣವಾಗಿದೆ.