ಮನೆ ಕಾನೂನು ಗೂಗಲ್’ಗೆ ₹1,337 ಕೋಟಿ ದಂಡ: ಎನ್’ಸಿಎಲ್ಎಟಿ ಪರಿಹಾರ ನಿರಾಕರಣೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

ಗೂಗಲ್’ಗೆ ₹1,337 ಕೋಟಿ ದಂಡ: ಎನ್’ಸಿಎಲ್ಎಟಿ ಪರಿಹಾರ ನಿರಾಕರಣೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

0

ಭಾರತೀಯ ಸ್ಪರ್ಧಾ ಆಯೋಗ ವಿಧಿಸಿದ್ದ ₹ 1,337 ಕೋಟಿ ದಂಡದ ಆದೇಶದ ವಿರುದ್ಧ ತಾನು ಸಲ್ಲಿಸಿದ್ದ ಮೇಲ್ಮನವಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್’ಸಿಎಲ್’ಎಟಿ) ಆದೇಶ ಪ್ರಶ್ನಿಸಿ ಗೂಗಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾ. ಪಿ ಎಸ್ ನರಸಿಂಹ ಅವರಿದ್ದ ಪೀಠದೆದುರು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಬುಧವಾರ ಅರ್ಜಿ ಪ್ರಸ್ತಾಪಿಸಿದರು. ಗೂಗಲ್ ತನ್ನ ಆಂಡ್ರಾಯ್ಡ್ ವೇದಿಕೆ ಮಾರುಕಟ್ಟೆ ಮಾಡುವ ವಿಧಾನವನ್ನು ಬದಲಿಸುವಂತೆ ಎನ್ಸಿಎಲ್ಎಟಿ ನೀಡಿರುವ ಆದೇಶ ಒತ್ತಾಯಿಸುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ತುರ್ತು ವಿಚಾರಣೆಗೆ ಕೋರಿದರು. ವಾದ ಮನ್ನಿಸಿದ ಸಿಜೆಐ ಜನವರಿ 16ರಂದು, ಸೋಮವಾರ ಪ್ರಕರಣದ ವಿಚಾರಣೆಗೆ ಸಮ್ಮತಿಸಿದರು.

ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಭಾವಿ ಸ್ಥಾನ ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಗೂಗಲ್’ಗೆ ಭಾರತೀಯ ಸ್ಪರ್ಧಾ ಅಯೋಗವು (ಸಿಸಿಐ) ಅಕ್ಟೋಬರ್ 2022ರಲ್ಲಿ ದಂಡ ವಿಧಿಸಿತ್ತು. ಆದೇಶವನ್ನು ಗೂಗಲ್  ಎನ್’ಸಿಎಲ್’ಎಟಿಯಲ್ಲಿ ಪ್ರಶ್ನಿಸಿತ್ತು. ಆದರೆ ಕಳೆದ ಜ. 4 ರಂದು ಆದೇಶ ನೀಡಿದ್ದ ಎನ್’ಸಿಎಲ್’ಎಟಿ ʼಮೇಲ್ಮನವಿ ಸಲ್ಲಿಸಲು ಗೂಗಲ್ ಯಾವುದೇ ಅವಸರ ತೋರದ ಕಾರಣ ಮಧ್ಯಂತರ ಪರಿಹಾರಕ್ಕೆ ಅದು ಒತ್ತಾಯಿಸುವಂತಿಲ್ಲ’ ಎಂದಿತ್ತು.

ಆದರೂ ಎನ್’ಸಿಎಲ್’ಎಟಿಯ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ರಾಕೇಶ್ ಕುಮಾರ್, ಮತ್ತು ತಾಂತ್ರಿಕ ಸದಸ್ಯ ಡಾ ಅಲೋಕ್ ಶ್ರೀವಾಸ್ತವ ಅವರು ಗೂಗಲ್ ತೋರಿದ ತುರ್ತು ಮತ್ತು ಸಲ್ಲಿಸಿದ್ದ ಬೃಹತ್ ದಾಖಲೆಗಳನ್ನು ಪರಿಗಣಿಸಿ ಏಪ್ರಿಲ್ 3ರಂದು ಅಂತಿಮ ವಿಚಾರಣೆಗೆ ಪಟ್ಟಿ ಮಾಡುವುದಾಗಿ ತಿಳಿಸಿತ್ತು. ಅಲ್ಲದೆ ಮನವಿ ಆಲಿಸುವ ಮುನ್ನ ಗೂಗಲ್ಗೆ ವಿಧಿಸಲಾದ ₹1,337 ಕೋಟಿ ದಂಡದ ಮೊತ್ತದಲ್ಲಿ ಮೊತ್ತದ ಶೇ.10ರಷ್ಟು ಹಣ ಠೇವಣಿ ಇರಿಸುವಂತೆ ಷರತ್ತು ವಿಧಿಸಿತ್ತು.

ಗೂಗಲ್’ಗೆ ಮತ್ತೆ ಹಿನ್ನಡೆ

ಪ್ಲೇ ಸ್ಟೋರ್ ನೀತಿಗಳ ಮೂಲಕ ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಭಾವಿ ಸ್ಥಾನ ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ₹936.44 ಕೋಟಿ ದಂಡ ವಿಧಿಸಿದ್ದ ಸಿಸಿಐ  ಆದೇಶ ಪ್ರಶ್ನಿಸಿ ಗೂಗಲ್ ಸಲ್ಲಿಸಿದ್ದ ಮತ್ತೊಂದು ಮೇಲ್ಮನವಿಗೆ ಪರಿಹಾರ ನೀಡಲು ಎನ್ಸಿಎಲ್ಎಟಿ ಬುಧವಾರ ನಿರಾಕರಿಸಿದೆ.

ಪ್ರಕರಣದಲ್ಲಿ ಗೂಗಲ್ ಪರವಾಗಿ ಹಿರಿಯ ನ್ಯಾಯವಾದಿಗಳಾದ ಹರೀಶ್ ಸಾಳ್ವೆ ಮತ್ತು ಸಜ್ಜನ್ ಪೂವಯ್ಯ ವಾದಿಸಿದ್ದರು. ಈ ಪ್ರಕರಣದಲ್ಲಿಯೂ “ದಂಡದ ಶೇ. 10ರಷ್ಟು ಮೊತ್ತವನ್ನು ನಾಲ್ಕು ವಾರದೊಳಗೆ ಠೇವಣಿ ಇರಿಸಿದರೆ ಮಾತ್ರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲಾಗುವುದು. ಏಪ್ರಿಲ್ 17ರಂದು ಅಂತಿಮ ವಿಚಾರಣೆ ನಡೆಯಲಿದ್ದು ಮಧ್ಯಂತರ ಆದೇಶ ನೀಡುವುದಿಲ್ಲ” ಎಂದು ಎನ್’ಸಿಎಲ್’ಎಟಿ ಹೇಳಿದೆ.