ಮೈಸೂರು(Mysuru): ಸಾರಾ ಅಬೂಬಕ್ಕರ್ ಕೇವಲ ಇಸ್ಲಾಂ ಲೇಖಕಿಯಲ್ಲ, ದಿಟ್ಟ ಕನ್ನಡ ಬರಹಗಾರ್ತಿ ಆಗಿದ್ದರು ಎಂದು ಸಾಹಿತಿ ಅರವಿಂದ ಮಾಲಗತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ವಿಜಯನಗರ 1ನೇ ಹಂತದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ‘ಸಾರಾ ಅಬೂಬಕ್ಕರ್‌ಗೆ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಕಾಲೀನ ಲೇಖಕಿಯರಲ್ಲಿ ಸಾರಾ ಅವರನ್ನು ಮೀರಿಸುವವರು ಕಾಣಿಸುವುದಿಲ್ಲ ಬರಹದಲ್ಲಿ ಸಾಕ್ಷಿಭೂತರಾಗಿದ್ದರಷ್ಟೇ ಅಲ್ಲದೇ ಸಾಮಾಜಿಕ ಹೋರಾಟಗಳಲ್ಲೂ ಪಾಲ್ಗೊಂಡು ತಮ್ಮತನವನ್ನು ತೋರಿಸಿದರು ಎಂದು ಹೇಳಿದರು.
ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳಿದ್ದಾರೆ. ಹಾಗೆಯೇ ಇಸ್ಲಾಂನಲ್ಲೂ ಇದ್ದಾರೆ. ಸಾರಾ ಸ್ವಧರ್ಮೀಯರು ಹಾಗೂ ಅನ್ಯಧರ್ಮೀಯರಿಂದ ಕಠೋರ ಪ್ರತಿಕ್ರಿಯೆಗಳನ್ನು ದಿಟ್ಟವಾಗಿ ಎದುರಿಸಿದರು. ಅವರ ವಿಚಾರಗಳನ್ನು ಸಮಾಜದಲ್ಲಿ ಸಕ್ರಿಯ ಹಾಗೂ ಜೀವಂತವಾಗಿರಿಸಿಕೊಂಡು ಮುಂದೆ ಸಾಗಬೇಕು ಎಂದು ಆಶಿಸಿದರು.
ಬಹಳ ಮಂದಿ ಹೇಳುವಂತೆ, ಸಾರಾ ಸುಧಾರಣಾವಾದಿಯಾಗಿದ್ದರು ಎನ್ನುವುದು ತಪ್ಪು ಕಲ್ಪನೆ. ಸುಧಾರಣಾವಾದ ಬಗ್ಗೆ ಹಾಗೂ ಅಸ್ತಿತ್ವದ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಸಾರಾ ಸ್ವತಂತ್ರ ಅಸ್ತಿತ್ವ ಮತ್ತು ಮಹಿಳೆಯರ ಅಸ್ತಿತ್ವ ಹಾಗೂ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು. ಆಗ, ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಪ್ರೊ.ಕಾಳಚನ್ನೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಭಾಗವಹಿಸಿದ್ದರು.