ಮೈಸೂರು(Mysuru) : ಒಡನಾಡಿ ಸಂಸ್ಥೆ ಕಳೆದ 32 ವರ್ಷಗಳಿಂದ ನೊಂದವರ ಪರವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ನಮ್ಮ ನೈತಿಕ ಬೆಂಬಲವಿದೆ ಎಂದು ನಟ ಚೇತನ್ ಅಹಿಂಸಾ ತಿಳಿಸಿದರು.
ನಗರದ ಒಡನಾಡಿ ಸೇವಾ ಸಂಸ್ಥೆಗೆ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜು ದಂಪತಿಯೊಂದಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಒಡನಾಡಿ ಮುರುಘಾ ಮಠ ಹಾಗೂ ಸ್ಯಾಂಟ್ರೊ ರವಿ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸವನ್ನ ಮಾಡುತ್ತಿದೆ. ಇವರ ಹೋರಾಟ ಸುಮಾರು 32 ವರ್ಷಗಳಿಂದ ನೊಂದವರ ಪರವಾಗಿ ನಡೆಯುತ್ತಿದೆ. ಅವರಿಗೆ ನಮ್ಮ ನೈತಿಕ ಬೆಂಬಲ ಇದೆ ಎಂದರು.
ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ವಿವಾದದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಟ ಚೇತನ್, ಕೇಸರಿ ತ್ಯಾಗದ ಸಂಕೇತ. ಬಸವಣ್ಣ, ಬುದ್ಧ ಸೇರಿದಂತೆ ಹಲವಾರು ಜನ ಮಹನೀಯರು ಇದೇ ಬಣ್ಣದ ಉಡುಪು ಧರಿಸಿದ್ದರು. ಇಂತಹ ಬಣ್ಣವನ್ನು ಒಂದು ಸಿದ್ಧಾಂತಕ್ಕೆ ಸೀಮಿತಗೊಳಿಸಬಾರದು. ಯಾರೂ ಕೂಡ ಇದನ್ನು ಹೈ ಜಾಕ್ ಮಾಡಬಾರದು. ಕೇಸರಿ ಹಿಂದುತ್ವದ ಬಣ್ಣ ಆಗಲಾರದು. ನಮ್ಮ ದೇಶದ ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ ಎಂದು ಹೇಳಿದರು.
ಅಲ್ಲದೇ ನಮ್ಮ ಧ್ವಜದಲ್ಲಿ ಹಸಿರು ಬಣ್ಣವೂ ಇದೆ. ಈ ಬಣ್ಣಗಳು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸಣ್ಣ ಸಣ್ಣ ತಪ್ಪುಗಳನ್ನು ಹುಡುಕುವುದು ಇವರ ಕಾಯಕವಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದನ್ನು ವಿರೋಧ ಮಾಡುವ ವಿಚಾರವಂತರ ಕೊರತೆ ಇದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.
ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜು ಮಾತನಾಡಿ, ಮುರುಘಾ ಮಠದಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯ ಸಂಬಂಧ, ಇಬ್ಬರು ಬಾಲಕಿಯರನ್ನು ಇಲ್ಲಿಗೆ ಕಳುಹಿಸಿದ್ದು ನಾನೇ, ಈಗ ಮಕ್ಕಳ ಮನಸ್ಥಿತಿ ಸುಧಾರಿಸಿದೆಯಂತೆ, ಮಕ್ಕಳು ಶಾಲೆಗೆ ಹೋಗಿದ್ದಾರೆ. ಅವರನ್ನು ನಾನು ಮಾತನಾಡಿಸಿಲ್ಲ. ಇಬ್ಬರು ಮಕ್ಕಳು ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬಂದಿದ್ದರು, ಅವರನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದೆ. ಇತರ ಮಕ್ಕಳ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ನನಗೆ ಗೊತ್ತಿಲ್ಲ. ಕಳೆದ 15 ವರ್ಷಗಳಿಂದ ನಾನು ಮಠದಿಂದ ದೂರ ಇದ್ದೇನೆ ಎಂದರು.
ರಾಜ್ಯ ಸರ್ಕಾರವು ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟಾಲಿನ್ ಹೇಳಿದ್ದರು.
ಸ್ಯಾಂಟ್ರೊ ರವಿ ವಿರುದ್ಧ ದೂರು ನೀಡಿರುವ ದೂರುದಾರ ಮಹಿಳೆ ಜೊತೆ ಚೇತನ್ ಮಾತುಕತೆ ನಡೆಸಿದರು.