ಪೊಲೀಸ್ ಠಾಣೆಗಳು, ವಾಣಿಜ್ಯ ತೆರಿಗೆ ಕಚೇರಿಗಳು, ನೋಂದಣಾಧಿಕಾರಿಗಳ ಕಚೇರಿಗಳು ನಗರಾಭಿವೃದ್ಧಿ ಪ್ರಾಧಿಕಾರ, ಪಾಲಿಕೆ ಕಚೇರಿಗಳು ಇವೆಲ್ಲವೂ ಅತ್ಯಂತ ಭ್ರಷ್ಟಾಚಾರ ನಡೆಸಲು ಫಲವತ್ತಾದ ಭೂಮಿಯಾಗಿದೆ ಎಂಬ ಕಟು ಸತ್ಯವನ್ನು ಸ್ವತಃ ಹೈಕೋರ್ಟ್ ನ್ಯಾಯಾಧೀಶರಾದ ವಿ.ಶ್ರೀಶಾನಂದ ತಿಳಿಸಿದ್ದಾರೆ.
ನಮ್ಮ ಜನರು ಲಂಚಕೋರರು, ನೆಟ್ಟಗಿರುವುದಿಲ್ಲ ಎಂಬುದು ಬ್ರಿಟಿಷರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ೧೯೪೭ ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ರೂಪಿಸಿದ್ದರು. ಈ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹೇಗೆ ಕೆಲಸ ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೆ ನಾಲ್ಕು ದಶಕಗಳೇ ಬೇಕಾಯಿತು. ೧೯೮೮ ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ನಮಗನ್ನಿಸಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಲ್ಲಿ ತಹಶೀಲ್ದಾರ್ ಆಗಿದ್ದ ಕಮಲಮ್ಮ ಜಾಮೀನು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ನ್ಯಾ.ಶ್ರೀಶಾನಂದ ಅವರು ಭ್ರಷ್ಟಾಚಾರ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ವಿವರಿಸಿದರು.
ಐಪಿಸಿ ಸೆಕ್ಷನ್ ೪೦೯ (ನಂಬಿಕೆ ದ್ರೋಹ), ೪೬೫ ( ಸಹಿ ಫೋರ್ಜರಿ), ೪೬೮ ( ನಕಲಿ ದಾಖಲೆ ಸೃಷ್ಟಿ) ಇವು ವೈಟ್ ಕಲರ್ ಅಪರಾಧಗಳಾಗಿವೆ. ತಪ್ಪು ಮಾಡಿದ ಆರೋಪಿ ನಂತರ ಅದರ ಫಲವನ್ನು ಉಣ್ಣಬೇಕು. ದಾಖಲೆಯ ಕಸ್ಟೊಡಿಯನ್ ( ಭದ್ರತೆ ಹೊಂದಿದವರು) ನೀವು ನಿಮ್ಮಿಂದ ಈ ಫೈಲ್ ಗಳನ್ನು ಇನ್ನೊಬ್ಬರ ಟೇಬಲ್ ಗೆ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆರೋಪಿ ಕಮಲಮ್ಮ ರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರತೀಕ್ ಚಂದ್ರಮೌಳಿ ಅವರು ಇದಕ್ಕೆ ಸಮಜಾಯಿಷಿ ನೀಡಲು ಪ್ರಯತ್ನಿಸಿದರು.
ಆಗ ನ್ಯಾಯಾಧೀಶರು ಮುಂದುವರೆದು, ಮೇಲಾಧಿಕಾರಿಯ ಸೂಚಿನೆಯನ್ನು ಪಾಲಿಸಿದ್ದೇನೆ ಎಂದು ಅರ್ಜಿದಾರರು ಹೇಳುತ್ತಿರುವುದು ನನಗೆ ಅರ್ಥವಾಗಿದೆ. ಎಲ್ಲವನ್ನೂ ಒಳಗೊಳ್ಳಲು ಎಫ್ ಐ ಆರ್ ಎನೂ ಎನ್ ಸೈಕ್ಲೋಪಿಡಿಯಾ ಅಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ಹೇಳಿದರು.
ಆರೋಪಿ ( ಅರ್ಜಿದಾರರು) ಯು ಬರೆದಿದ್ದೆಲ್ಲಾ ಚೆನ್ನಾಗಿದ್ದರೆ ಅವರೇಕೆ ಕಟಕಟೆಗೆ ಬರಬೇಕಿತ್ತು? ಇಲ್ಲಿಯತನಕ ಹೇಗೋ ಮ್ಯಾನೇಜ್ ಮಾಡಿದ್ದಾರೆ. ಇನ್ನೊಂದಿಷ್ಟು ದಿನ ಮಾಡಿಕೊಳ್ಳಲಿ ಅಷ್ಟು ದಿನ ಅವರಿಗೆ ಕಮಾಯಿ ಕಮ್ಮಿಯಾಗಲಿದೆ. ಆಗಲಿ ಎಂದು ಅರ್ಜಿದಾರರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಅಧಿಕಾರಿಗಳು ಯಾರದೋ ಜಾಗವನ್ನು ಇನ್ಯಾರಿಗೋ ಸೈಟ್ ಆಗಿ ಕೊಟ್ಟು ಎಲ್ಲರಿಗೂ ಮೋಸ ಮಾಡಿಕೊಂಡಿರುತ್ತಾರೆ. ಈ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲಿ ಆಮೇಲೆ ನೋಡೋಣ ಎಂದು ವಿಚಾರಣೆಯನ್ನು ಮಾರ್ಚ್ ೯ ಕ್ಕೆ ಮುಂದೂಡಿದರು.
ಜಾಮೀನು ಅರ್ಜಿಯನ್ನು ಪರಿಗಣಿಸಬೇಕು ಎಂದು ವಕೀಲ ಚಂದ್ರಮೌಳಿ ಮನವಿ ಮಾಡಿಕೊಂಡಾಗ ಸಿಆರ್ ಪಿಸಿ ಸೆಕ್ಷನ್ ೪೩೮ ರ ಅಡಿ ಅರ್ಹತೆ ಆಧಾರದಲ್ಲಿ ಪ್ರಕರಣವನ್ನು ನಿರ್ಣಯಿಸುವಲ್ಲಿ ನನ್ನಷ್ಟು ಉದಾರಿಗಳು ಇನ್ಯಾರು ಇಲ್ಲ. ಬಿಡಿಎ ಎಂದುಕೊಂಡು ಬೆಂಗಳೂರನ್ನೇ ಮಾರುವುದಕ್ಕೆ ಮುಂದಾದವರಿಗೆ ಜಾಮೀನು ನೀಡಬೇಕಾ? ಎಂದು ಭ್ರಷ್ಟಾಚಾರದ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದರು.