ಬೆಂಗಳೂರು: ಅಪಘಾತವನ್ನುಂಟು ಮಾಡಿ ಸ್ಥಳದಿಂದ ಪರಾರಿಯಾಗುತ್ತಿದ್ದ ಚಾಲಕಿಯೊಬ್ಬರು, ತಮ್ಮನ್ನು ತಡೆಯಲು ಬಂದ ಯುವಕನಿಗೆ ಕಾರು ಗುದ್ದಿಸಿ ಬಾನೆಟ್ ಮೇಲೆಯೇ ಕೆಲದೂರ ಹೊತ್ತೊಯ್ದ ಘಟನೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾರಿನ ಮೇಲೆ ವ್ಯಕ್ತಿ, ಕಾರಿನ ಹಿಂದೆ ಒಂದಷ್ಟು ದ್ವಿಚಕ್ರ ವಾಹನಗಳು, ಕೆಲವು ಮಂದಿ ವಿಡಿಯೋ ಚಿತ್ರೀಕರಿಸುತ್ತಿದ್ದರು. ಇವೆಲ್ಲವೂ ಯಾವುದೋ ಸಿನಿಮಾ ಶೂಟಿಂಗ್ ರೀತಿ ಕಾಣುತ್ತಿತ್ತು. ಬಾನೆಟ್ ಮೇಲೆ ಬಿಗಿ ಹಿಡಿದು ಕೂತಿದ್ದ ಯುವಕನ್ನು ಒಂದು ಕಿ.ಮೀ.ವರೆಗೂ ಕಾರು ಚಲಾಯಿಸಿಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ ಹಾಗೂ ಅದರ ವಿಡಿಯೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಪ್ರಕರಣದ ಸಂಬಂಧ ಜ್ಞಾನಭಾರತಿ ಪೊಲೀಸರು ಐದು ಜನರನ್ನು ವಶಕ್ಕೆ ಪಡೆದಿದ್ದಾರೆ.
ದರ್ಶನ್ ಎಂಬುವವರು ಕೊಟ್ಟ ದೂರಿನ ಮೇರೆಗೆ ಕಾರು ಚಾಲಕಿ ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದು, ಪ್ರಿಯಾಂಕಾ ವಿರುದ್ಧ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಮೋದ್ ಹಾಗೂ ದರ್ಶನ್ ದೂರಿನ ಮೇಲೆ ಎರಡು ಎಫ್’ಐಆರ್ ದಾಖಲಾಗಿವೆ.
ಈ ನಡುವೆ ಪ್ರಿಯಾಂಕಾ ಅವರು ಲೈಂಗಿಕ ದೌರ್ಜನ್ಯದಡಿ ದೂರು ದಾಖಲು ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ದರ್ಶನ್, ಯಶವಂತ್, ಸುಜನ್ ಹಾಗೂ ವಿನಯ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ ?
ಚಾಲಕಿ ಶ್ವೇತಾ, ಟಾಟಾ ಕಾರು ಚಲಾಯಿಸಿಕೊಂಡು ಹೊರಟಿದ್ದರು. ದರ್ಶನ್, ಮಾರುತಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದರು. ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ದರ್ಶನ್ ಅವರಿಗೆ ಮಧ್ಯದ ಬೆರಳು ತೋರಿಸಿದ್ದ ಶ್ವೇತಾ, ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದರು.
ಕೋಪಗೊಂಡ ದರ್ಶನ್, ಶ್ವೇತಾ ಕಾರು ಹಿಂಬಾಲಿಸಿದ್ದರು. ಮಂಗಳೂರು ಪಿಯು ಕಾಲೇಜ್ ಬಳಿ ಕಾರು ಅಡ್ಡಗಟ್ಟಲೆಂದು ರಸ್ತೆ ಮಧ್ಯೆದಲ್ಲಿ ನಿಂತಿದ್ದರು. ಚಾಲಕಿ ಶ್ವೇತಾ ಕಾರು ನಿಲ್ಲಿಸದೇ ದರ್ಶನ್ ಮೈ ಮೇಲೆಯೇ ಚಲಾಯಿಸಿಲು ಮುಂದಾಗಿದ್ದರು. ಆಗ ದರ್ಶನ್, ಬಾನೆಟ್ ಏರಿದ್ದರು. ಅದೇ ಸ್ಥಿತಿಯಲ್ಲೇ ಶ್ವೇತಾ ಕಾರು ಚಲಾಯಿಸಿಕೊಂಡು 1 ಕಿ.ಮೀ.ವರೆಗೂ ಹೋಗಿದ್ದರು.
ದರ್ಶನ್ ಕಡೆಯ ವ್ಯಕ್ತಿಗಳು ಬಂದು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಕಾರಿನ ಗಾಜುಗಳನ್ನು ಹೊಡೆದು ಹಾಕಿದ್ದಾರೆ. ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ.