ಮನೆ ಅಪರಾಧ ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಅರಣ್ಯ ಸಂಚಾರಿದಳದ ಅಧಿಕಾರಿಗಳ ದಾಳಿ: ಪಕ್ಷಿಗಳ ವಶ

ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಅರಣ್ಯ ಸಂಚಾರಿದಳದ ಅಧಿಕಾರಿಗಳ ದಾಳಿ: ಪಕ್ಷಿಗಳ ವಶ

0

ಮೈಸೂರು(Mysuru): ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇರುವ ನಟ ದರ್ಶನ್ ಅವರದ್ದು ಎನ್ನಲಾದ ಫಾರ್ಮ್‌ ಹೌಸ್‌ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿರುವ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು, ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಂಡ ಪಕ್ಷಿಗಳು ಸಂರಕ್ಷಿತ ಪಕ್ಷಿಗಳಾದ್ದರಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ದಾಳಿ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಸಂಚಾರಿ ದಳದ ಮುಖ್ಯಸ್ಥ ಡಿಸಿಎಫ್‌ಒ ಭಾಸ್ಕರ್‌, ಕೆಂಪಯ್ಯನಹುಂಡಿಯ ತೋಟದ ಮನೆಯಲ್ಲಿ ಸಾಕುತ್ತಿರುವ ಕೆಲವು ವಿದೇಶಿ ಪ್ರಾಣಿ, ಪಕ್ಷಿಗಳಿಗೆ ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಈ ಕಾರಣಕ್ಕೆ ದಾಳಿ ನಡೆದಿದೆ ಎಂದು ತಿಳಿಸಿದರು.

ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿರುವ 4 ಬಾತುಕೋಳಿಗಳ ವಿಶಿಷ್ಟ ಪ್ರಭೇದದ ಜಲಪಕ್ಷಿಗಳನ್ನು (ಬಾರ್‌ ಹೆಡೆಡ್‌ ಗೂಸ್‌) ಸಾಕುವಂತಿಲ್ಲ. ಸಾಕುವುದು ಅಪರಾಧ. ಇವುಗಳು ಕಾಡಿನಲ್ಲೇ ಬದುಬೇಕಿದ್ದು, ಮೃಗಾಲಯ ಅಥವಾ ಮನೆ, ಫಾರ್ಮ್‌’ಗಳಲ್ಲಿ ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ ಎಂದು ಅವರು ಹೇಳಿದರು.

ಸಾಕಣೆ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಿಸಲಾಗಿದೆ. ಈ ಪಕ್ಷಿಗಳನ್ನು ಅವುಗಳದ್ದೇ ಪ್ರಭೇದದ ಪಕ್ಷಿಗಳು ಜೀವಿಸುವ ತಿ.ನರಸೀಪುರದ ಸಮೀಪದ ಹದಿನಾರು ಕೆರೆಯಲ್ಲಿ ಬಿಡಲು ನ್ಯಾಯಾಲಯದ ಅನುಮತಿ ಪಡೆಯುತ್ತಿದ್ದೇವೆ, ಬಳಿಕ ಅಲ್ಲಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್‌ ಹೆಡೆಡ್‌ ಗೂಸ್‌ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ಹಿಮಾಲಯ ಪರ್ವತ ಪ್ರದೇಶ ದಾಟಿ ಭಾರತಕ್ಕೆ ವಲಸೆ ಬರುತ್ತವೆ. ಇವುಗಳು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಅರಣ್ಯದಲ್ಲೇ ಸ್ವತಂತ್ರವಾಗಿ ಬದುಕಬೇಕಿರುವ ಹುಲಿ, ನವಿಲು ಇತ್ಯಾದಿ ವಿಭಾಗಕ್ಕೆ ಸೇರಿದ ಪಕ್ಷಿಗಳು ಎಂಬುದನ್ನು ಸಾರ್ವಜನಿಕರು ಅರಿತಿರಬೇಕು ಎಂದು ಅವರು ತಿಳಿಸಿದ್ದಾರೆ.

ಅನುಮತಿ ಪತ್ರ ಹಾಜರುಪಡಿಸಲು ಆದೇಶ: ಈ ಫಾರ್ಮ್‌ ಹೌಸ್‌’ನಲ್ಲಿ ಅಪೂರ್ವ ವಿದೇಶಿ ಪಕ್ಷಿಗಳನ್ನು ಸಾಕುತ್ತಿದ್ದು, ಇವುಗಳಿಗೆ ವನ್ಯಜೀವಿ ಕಾಯ್ದೆಯಡಿ ಅನುಮತಿ ಪತ್ರ ಅಥವಾ ಮಾಲೀಕತ್ವ ಪತ್ರವೂ ಸೇರಿದಂತೆ ದಾಖಲೆ ಪತ್ರ ಇದ್ದರೆ ಹಾಜರು ಪಡಿಸಲು ತಿಳಿಸಲಾಗಿದೆ ಎಂದು ಡಿಸಿಎಫ್‌ಒ ಭಾಸ್ಕರ್‌ ತಿಳಿಸಿದರು.

ಕೋಳಿ ಪ್ರಭೇದದ ಮೆಕಾಸೆ, ಗಿಳಿ ಪ್ರಭೇದದ ಸನ್‌ಕಾಯ್ನ್‌, ಪುಕಾಟೊ ಇತ್ಯಾದಿಗಳು, ಕಪ್ಪು ಹಂಸ (ಬ್ಲ್ಯಾಕ್‌ ಸ್ಪಾನ್‌), ಉಷ್ಟ್ರಪಕ್ಷಿ (ಆಸ್ಟ್ರಿಚ್‌), ಯೆಮು ಮುಂತಾದ ಹಲವು ವಿಧದ ಪಕ್ಷಿಗಳು ಫಾರ್ಮ್‌ ಹೌಸ್‌’ನಲ್ಲಿ ಇವೆ. ಇವುಗಳನ್ನು ಸಾಕಬಹುದು ಆದರೆ, ಮಾಲೀಕತ್ವ ಮತ್ತಿತರ ದಾಖಲಾತಿಗಳು ಬೇಕಿವೆ ಎಂದು ತಿಳಿಸಿದರು.