ಮನೆ ರಾಜಕೀಯ ಸ್ಯಾಂಟ್ರೊ ರವಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ: ಸಿದ್ದರಾಮಯ್ಯ ಆರೋಪ

ಸ್ಯಾಂಟ್ರೊ ರವಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ: ಸಿದ್ದರಾಮಯ್ಯ ಆರೋಪ

0

ಮೈಸೂರು(Mysuru): ಸ್ಯಾಂಟ್ರೊ ರವಿ ಪ್ರಕರಣ ಬಯಲಿಗೆ ಬಂದರೆ ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತದೆ ಆದ್ದರಿಂದ ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಂದು ತಮ್ಮ ಮೈಸೂರಿನ ಶಾರದಾದೇವಿ ನಗರದ ಮನೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಐಡಿ ಸ್ವತಂತ್ರ ಸಂಸ್ಥೆಯಲ್ಲ. ಇದು ರಾಜ್ಯ ಸರ್ಕಾರದ ಕೆಳಗಿರುವ ಒಂದು ಸಂಸ್ಥೆ. ಇವರು ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಸ್ಯಾಂಟ್ರೋ ರವಿ ಪ್ರಕರಣವನ್ನು ಸರ್ಕಾರ ಸಿಐಡಿ ಮೂಲಕ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ

ಕರ್ನಾಟಕದಲ್ಲಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಾವು 130 ರಿಂದ 150 ಸ್ಥಾನ ಗೆಲ್ಲುತ್ತೇವೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ತೀರ್ಮಾನ ಮಾಡಿದ್ದಾರೆ. ಯಾರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೋಲಾರದಲ್ಲಿಯೇ ಸ್ಪರ್ಧೆ

ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾತ್ರ ನನ್ನ ಸ್ಪರ್ಧೆ. ನನ್ನನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಪ್ರಯತ್ನ ಮಾಡಿದರು ಅಲ್ಲಿ ನಾನೇ ಗೆಲ್ಲೋದು. ಕೋಲಾರದಲ್ಲೂ ನನ್ನನ್ನು ಸೋಲಿಸಲು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಹಾಗೂ ಜೆಡಿಎಸ್ ಒಳಸಂಚು ಮಾಡುತ್ತಿವೆ. ಆದರೆ ಅವರೇನೇ ಮಾಡಿದರೂ ನಾನೇ ಕೋಲಾರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭರವಸೆ ಈಡೇರಿಸುತ್ತೇವೆ

ನೂರಕ್ಕೆ ನೂರು ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದ ನಂತರ, ನಾವು ಹೇಳಿದಂತೆ 200 ಯೂನಿಟ್ ವಿದ್ಯುತ್ ಹಾಗೂ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ., ಕೊಡುತ್ತೇವೆ ಎಂದು ಹೇಳಿದ್ದೇವೆ. ಎಷ್ಟು ಖರ್ಚಾದರು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಹಿಂದಿನ ಲೇಖನಜಮ್ಮು ಕಾಶ್ಮೀರದಲ್ಲಿ ಅವಳಿ ಬಾಂಬ್ ಸ್ಫೋಟ: 7 ಜನರಿಗೆ ಗಾಯ
ಮುಂದಿನ ಲೇಖನನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಅರಣ್ಯ ಸಂಚಾರಿದಳದ ಅಧಿಕಾರಿಗಳ ದಾಳಿ: ಪಕ್ಷಿಗಳ ವಶ