ಮನೆ ಅಪರಾಧ ಚಾಮರಾಜನಗರ: ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ವರ್ಗಾವಣೆಯಾಗಿದ್ದ ಕಾನ್’ಸ್ಟೇಬಲ್ ಆತ್ಮಹತ್ಯೆಗೆ ಯತ್ನ

ಚಾಮರಾಜನಗರ: ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ವರ್ಗಾವಣೆಯಾಗಿದ್ದ ಕಾನ್’ಸ್ಟೇಬಲ್ ಆತ್ಮಹತ್ಯೆಗೆ ಯತ್ನ

0

ಚಾಮರಾಜನಗರ(Chamarajanagara): ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ವರ್ಗಾವಣೆಯಾಗಿದ್ದ ಚಾಮರಾಜನಗರ ಗ್ರಾಮಾಂತರ ಠಾಣೆಯ ಕಾನ್‌’ಸ್ಟೆಬಲ್‌ ಒಬ್ಬರು ಶುಕ್ರವಾರ ರಾತ್ರಿ ನಗರದ ಎಸ್‌ಪಿ ಕಚೇರಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ರಾಮನಹಳ್ಳಿ ಗ್ರಾಮದ ಎಚ್‌.ಆರ್‌.ಮಹೇಶ್‌ ಅವರು ಆತ್ಮಹತ್ಯೆಗೆ ಯತ್ನಿಸಿದ ಕಾನ್‌’ಸ್ಟೆಬಲ್‌.

ಅದೃಷ್ಟವಶಾತ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಗೆ ಬೆಂಕಿ ಹಚ್ಚಿಕೊಳ್ಳುವುದಕ್ಕೂ ಮುನ್ನ ಮೈಮೇಲೆ ಏನು ಸುರಿದುಕೊಂಡಿದ್ದರು ಎಂಬುದು ಗೊತ್ತಾಗಿಲ್ಲ. ಕೈ, ಪಕ್ಕೆಲುಬಿನ ಭಾಗ, ಎಡ ತೊಡೆಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀಟ್‌ ಕರ್ತವ್ಯದಲ್ಲಿ ನಿರ್ಲಕ್ಷ ತೋರಿರುವ ಆರೋಪದಲ್ಲಿ ಏಳು ಕಾನ್‌’ಸ್ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಶಿವಕುಮಾರ್‌ ವರ್ಗಾವಣೆ ಮಾಡಿದ್ದರು. ಜೊತೆಗೆ ಅವರ ವಿರುದ್ಧ ತನಿಖೆಗೂ ಅಧಿಕಾರಿಗಳಿಗೆ ಸೂಚಿಸಿದ್ದರು. ವರ್ಗಾವಣೆಗೊಂಡ ಏಳು ಮಂದಿಯಲ್ಲಿ ಮಹೇಶ್‌ ಕೂಡ ಒಬ್ಬರು. ಅವರನ್ನು ಹನೂರು ಠಾಣೆಗೆ ವರ್ಗ ಮಾಡಲಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದರಿಂದ ಮನನೊಂದು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಸ್ಪೀಟ್‌ ದಂಧೆ ಸೇರಿದಂತೆ ಅಪರಾಧ ಚಟುವಟಿಕೆಗಳು ಹೆಚ್ಚು ನಡೆಯುತ್ತಿದ್ದ ಪ್ರದೇಶದಲ್ಲಿ ಬೀಟ್‌ ಕರ್ತವ್ಯದಲ್ಲಿದ್ದ ಏಳು ಕಾನ್‌’ಸ್ಟೆಬಲ್‌ಗಳ ವಿರುದ್ಧ ವಿಚಾರಣೆಗೆ ಸೂಚಿಸಲಾಗಿತ್ತು ಎಂದು ಎಸ್‌ಪಿ ಶಿವಕುಮಾರ್‌ ತಿಳಿಸಿದರು.

ಶುಕ್ರವಾರ ರಾತ್ರಿ ಮಹೇಶ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣವೇ ಡಿವೈಎಸ್‌’ಪಿ ಹಾಗೂ ಇನ್‌’ಸ್ಪೆಕ್ಟರ್‌ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮಹೇಶ್‌ ಅವರನ್ನು ಆಸ್ಪತ್ರೆಗೂ ದಾಖಲಿಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್‌ಪಿ ಪ್ರಿಯದರ್ಶಿಣಿ ಸಾಣಿಕೊಪ್ಪ ಅವರಿಗೆ ತಿಳಿಸಲಾಗಿದೆ. ಮಹೇಶ್‌ ಅವರ ಜೀವಕ್ಕೆ ಅಪಾಯ ಇಲ್ಲ ಎಂದು ಶಿವಕುಮಾರ್‌ ಹೇಳಿದರು.

ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಪ್ರತಿಕ್ರಿಯಿಸಿ, ಮಹೇಶ್‌ ಅವರನ್ನು ಶುಕ್ರವಾರ ರಾತ್ರಿ ಆಸ್ಪ‍ತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಮೈಮೇಲೆ ಸುಟ್ಟಗಾಯಗಳಿದ್ದವು. ತಕ್ಷಣವೇ ಕರ್ತವ್ಯದಲ್ಲಿದ್ದ ಸರ್ಜನ್‌ ಅವರಿಗೆ ಚಿಕಿತ್ಸೆ ನೀಡಿದರು. ಈಗ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದರು.

ಎಸ್‌’ಪಿ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಎಸ್‌ಪಿಯವರು ಅದನ್ನು ದೃಢಪಡಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ‘ಅದನ್ನು ಪರಿಶೀಲಿಸುತ್ತೇವೆ ಎಂದಷ್ಟೇ ಹೇಳಿದರು.