ಮನೆ ದಾಂಪತ್ಯ ಸುಧಾರಣೆ ತಾಳ್ಮೆ, ಪ್ರೀತಿ ಸುಖ ಸಂಸಾರಕ್ಕೆ ಸೋಪಾನ

ತಾಳ್ಮೆ, ಪ್ರೀತಿ ಸುಖ ಸಂಸಾರಕ್ಕೆ ಸೋಪಾನ

0

ನೂರಾರು ಕನಸು ಹೊತ್ತ ಸುಂದರ ಹುಡುಗಿಗೆ ಚಂದದ ಹುಡುಗನೂಂದಿಗೆ ವಿವಾಹವಾಯಿತು. ನೋಡಿದವರೆಲ್ಲ ಜೋಡಿ ಬಗ್ಗೆ ಹೆಮ್ಮೆ ಪಟ್ಟರು. ಖುಷಿ ಖುಷಿಯಾಗಿ ಹುಡುಗಿ ಗಂಡನ ಮನೆಗೆ ಬಂದಳು.  ಕೆಲವೇ ದಿನಗಳ ರಜೆ ಮುಗಿದ ಮೇಲೆ ಹುಡುಗ ತನ್ನ  ಕೆಲಸದತ್ತ ಗಮನಹರಿಸಿದ. ರಾತ್ರಿ ಬರುವುದು ತಡವಾಗುತ್ತಿತ್ತು. ಹೆಂಡತಿಯ ಜೊತೆ ಮಾತನಾಡುವಷ್ಟು ವ್ಯವಧಾನವಿರಲಿಲ್ಲ. ಮಾಡಿದ ಅಡುಗೆ ತಿಂಡಿಯನ್ನು ತಿಂದು, ಚೆನ್ನಾಗಿದೆ ಎಂಬ ಒಳ್ಳೆ  ಮಾತಿಲ್ಲ. ಗುಮ್ಮ ಗುಸ್ಕನಂತೆ ತಿನ್ನುತ್ತಿದ್ದ. ಹೊರಗಡೆ ಕರೆದುಕೊಂಡು ಹೋಗುತ್ತಿರಲಿಲ್ಲ. ಆಕೆಗೆ ಸಿಟ್ಟು ಬರುತ್ತಿತ್ತು ಇವೆಲ್ಲವನ್ನೂ ಬಾಯಿ ಬಿಟ್ಟು ಹೇಳಬೇಕಾ? ಹೆಂಡತಿಯನ್ನು  ನೋಡಿಕೊಳ್ಳುವುದು ಹೀಗೆನಾ? ನನಗೂ ಆಸೆ, ಭಾವನೆಗಳಿಲ್ಲವೇ? ಪ್ರಶ್ನಿಸಿಕೊಳ್ಳುತ್ತಿದ್ದಳು. ಗಂಡನನ್ನು ಕಂಡರೆ ಸಿಟ್ಟು ಬರುತ್ತಿತ್ತು. ಈಗೀಗ  ವಿಪರೀತಕ್ಕೆ ಹೋಯಿತು. ಒನ್ನೊಮ್ಮೆ ಅವನ ಮೌನವನ್ನು ಕಂಡು ಕೊಂದು ಬಿಡಲೇ ಎನ್ನುವಷ್ಟು ಸಿಟ್ಟು ಬರುತ್ತಿತ್ತು. ಕೊಂದು ಹಾಕುವ ವಿಚಾರ ಅವಳ  ತಲೆಯಲ್ಲಿ  ಮಡುಗಟ್ಟಿ  ದೊಡ್ಡ ಸುಳಿಯಾಗಿ ತಿರುಗುತ್ತಿತ್ತು.

ಸ್ವಲ್ಪ ದಿನ ಕಳೆದರೂ  ಯಾವ ಬದಲಾವಣೆ ಇಲ್ಲ. ಅವಳ ತಾಳ್ಮೆ ತಪ್ಪಿತು. ಕೊಂದೆ ಬಿಡಬೇಕು ಎಂದು ನಿರ್ಧರಿಸಿ ಬಿಟ್ಟಳು . ಹೇಗೆ ಕೊಲ್ಲುವುದು? ಕೊಂದ ಮೇಲೆ  ಪೋಲಿಸು, ಶಿಕ್ಷೆ , ಕಾನೂನು, ಹೆದರಿದಳು. ತಿಳಿಯದಂತೆ ಮಾಡಲು ಯಾರು ಸಹಾಯ ಮಾಡುತ್ತಾರೆ. ಯೋಚಿಸಿ ತಾಯಿ ಹತ್ತಿರ ಹೇಳಲು ತವರು ಮನೆಗೆ ಬಂದಳು. ಅಳುತ್ತಾ ಎಲ್ಲವನ್ನು ಹೇಳಿದಳು, ಅಮ್ಮ ನನ್ನ ಗಂಡನಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ, ತಿರಸ್ಕಾರ  ಮಾಡುತ್ತಾರೆ, ನನ್ನ ಜೊತೆ  ಮುಖ ಕೊಟ್ಟು ಮಾತಾಡಲ್ಲ. ನನಗೆ ಈ ಗಂಡ ಬೇಡ ನಾನು ರೋಸಿ ಹೋಗಿದ್ದೇನೆ.  ಅವನನ್ನು  ಕೊಲ್ಲಬೇಕು ಎನಿಸುತ್ತಿದೆ. ಆದರೆ ನನಗೆ ಭಯ, ಕೊಂದುಬಿಟ್ಟರೆ ಪೊಲೀಸು, ಕೋರ್ಟು, ಶಿಕ್ಷೆ, ಇದೆಲ್ಲಾ ಆಗುತ್ತದೆ. ನಾನೇ ಕೊಂದರೆ ನನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಅಂಥ  ಒಂದು ಉಪಾಯ ಹೇಳು  ಅಮ್ಮ ಎಂದು ಬೇಡಿದಳು.

ತಾಯಿ ಆತಂಕದಿಂದ,  ಮಗಳೇ ಹೀಗೆಲ್ಲ ಮಾತಾಡಬಾರದು. ಸೂಕ್ಷ್ಮ ಅರಿತು ನಡೆಯಬೇಕು. ಅವನ ಬೇಕು ಬೇಡಗಳನ್ನು ನೀನೇ ತಿಳಿಯಬೇಕು. ಸ್ವಲ್ಪ ಕಾಲ ಹೋದರೆ ಸರಿ ಹೋಗುತ್ತದೆ ತಾಳು ಮಗಳೇ ಎಂದಳು. ಆದರೆ ಈ ಹುಡುಗಿ ಹಿಡಿದ ಪಟ್ಟು ಬಿಡಲಿಲ್ಲ. ಸಾಧ್ಯವಿಲ್ಲ  ಇಷ್ಟು ಕಾಲದಿಂದಲೂ ನೋಡಿದ್ದೇನೆ. ಅವರು  ನನ್ನೊಂದಿಗೆ ಹೊಂದಿಕೊಂಡು ಸರಿಯಾಗಿರಲ್ಲ. ನಾನು ಅವನನ್ನು ಕೊಂದೇ ಕೊಲ್ಲುತ್ತೇನೆ.  ಆದರೆ ಕೊಂದಿದ್ದು  ಯಾರಿಗೂ ತಿಳಿಯಬಾರದು ಅಂತ ಉಪಾಯ ಹೇಳಿಕೊಡು ಎಂದು ಮೈಮೇಲೆ ಗಣ ಹೊಕ್ಕವರಾಗೇ

ಚಿರುತ್ತಿದ್ದಳು.

ತಲ್ಲಣಗೊಂಡ ತಾಯಿ ಮಗಳ ಮಾತಿಗೆ ಒಪ್ಪಿದಳು. ನೀನು ನಿನ್ನ ಗಂಡನನ್ನು ಯಾರಿಗೂ ಗೊತ್ತಾಗದಂತೆ  ಸಾಯಿಸಲು  ಸಹಾಯ ಮಾಡುತ್ತೇನೆ ಎಂದಳು. ಮಗಳು ಒಂದು ಸ್ಥಿಮಿತಕ್ಕೆ  ಬಂದಳು. ತಾಯಿ ಹೇಳಿದಳು, ಮಗಳೇ  ನಿನಗೆ ಉಪಾಯ ಹೇಳುವ ಮೊದಲು  ನಾನು ಕೊಡುವ  ಕೆಲವು ಸಲಹೆಗಳನ್ನು  ಕೇಳಿ ಅದರಂತೆ ನಡೆಯಬೇಕು. ಅದು ನಿನ್ನ ಕೈಲಿ  ಸಾಧ್ಯವಾಗುವುದಿಲ್ಲ  ಅಂತ ಅನಿಸುತ್ತದೆ. ಕೇಳಿದ  ಮಗಳು  ಅಮ್ಮಾ ಯಾರಿಗೂ ಅನುಮಾನ ಬರದಂತೆ  ಗಂಡನನ್ನು ಕೊಲ್ಲಲು ಸಹಾಯ ಮಾಡುವೆಯಾದರೆ ನೀನು ಹೇಳುವ ಎಂತಾ ಕಷ್ಟದ ಕೆಲಸವನ್ನು ಮಾಡುತ್ತೇನೆ ಎಂದಳು. 

ಈಗ ತಾಯಿ ಹೇಳತೊಡಗಿದಳು. ಕೆಲವು ತಿಂಗಳ ಕಾಲ ನೀನು ಅವನೊಡನೆ ಶಾಂತಿ- ಸಂಯಮದಿಂದ ಇರಬೇಕು. ಜಗಳ ಆಡಬೇಡ. ಇದರಿಂದ ಯಾರಿಗೂ ನಿನ್ನ ಮೇಲೆ ಅನುಮಾನ ಬರಲು ಸಾಧ್ಯವಿಲ್ಲ.  ನೀನು  ಯಾವಾಗಲೂ ಸಿಂಗರಿಸಿಕೊಂಡು ಓಡಾಡಬೇಕು. ಮನೆಯನ್ನು ಶುಚಿಯಾಗಿಡಬೇಕು ಕೂಣೆಗಳು, ಪಡಸಾಲೆ, ಅಡಿಗೆಮನೆ, ಹೂ ಗಿಡಗಳು, ಸುತ್ತಮುತ್ತ ಸ್ವಚ್ಛವಾಗಿ ಚೆನ್ನಾಗಿ ಕಾಣುವಂತೆ ಇರಿಸಬೇಕು.  ನಿನ್ನ ಗಂಡ ಬರುವ ಸಮಯಕ್ಕೆ  ಕಾದು  ಪ್ರೀತಿಯಿಂದ ಮಾತನಾಡಿಸಿ ಅವನು ಹೇಳುವ ವಿಷಯಗಳನ್ನು ತಾಳ್ಮೆಯಿಂದ ಕೇಳಬೇಕು. ನಿನಗೆ ತಿಳಿದ ಸಮಾಧಾನದ ಉತ್ತರ ಕೊಡಬೇಕು. ನಿತ್ಯ ಅವನ ಜೊತೆ ಕುಳಿತು ಊಟ ಮಾಡಬೇಕು. ನಿನ್ನ ಗಂಡನಿಗೆ  ಸತ್ಯವಾದ ವಿಷಯ ಹೇಳಬೇಕು. ಅವನ  ಶ್ರೇಯಸ್ಸಿನ ಕಡೆ  ಗಮನ ಕೊಡು. ಎಣ್ಣೆ ಒತ್ತಿ ನೆತ್ತಿಗೆ ನೀರು ಹಾಕಲು ಸಹಾಯ ಮಾಡಬೇಕು. ರಜಾ ದಿನಗಳಲ್ಲಿ ವಿಶೇಷ ಅಡುಗೆ ತಿಂಡಿ ತಯಾರಿಸಿ ಜೊತೆಯಾಗಿ ಊಟ ಮಾಡಬೇಕು.  ಆಶ್ಚರ್ಯ ವಾಗುವಂತೆ ಇಷ್ಟವಾದ ಉಡುಗರೆಯನ್ನು ತಂದು ಕೊಡಬೇಕು. ನಿನಗೆ ಬೇಡ ಎಂದರೆ ಅವನ ಮಾತಿಗೆ ಎದುರಾಡದೆ  ಇಷ್ಟ ಇರುವುದನ್ನೇ ಕೊಡಬೇಕು.

ಈಗ ನಾನು ಹೇಳಿದ ವಿಷಯಗಳನ್ನು ಮರೆಯದೆ ಕೆಲವು ತಿಂಗಳು ಕಾಲ ಮಾಡಿದರೆ ನೀನು ನಿನ್ನ ಗಂಡನನ್ನು ನೀನೇ ಸಾಯಿಸಿದೆ ಎಂಬ ಅನುಮಾನ ಅವನು ಸತ್ತ ಮೇಲೂ ಬರುವುದಿಲ್ಲ ಎಂದು  ಒಂದು  ಪುಡಿ ತುಂಬಿದ ಪುಟ್ಟ ಬಾಟಲಿ ಕೊಟ್ಟು, ಇದು ಜೋಪಾನ ಯಾರಿಗೂ ತಿಳಿಯಬಾರದು. ನಿಧಾನವಾಗಿ ಕೆಲಸ ಆರಂಭಿಸುತ್ತದೆ. ದಿನಾ  ಸ್ವಲ್ಪ ಪುಡಿಯನ್ನು  ಊಟದಲ್ಲಿ  ಬೆರೆಸಿ ತಿನ್ನುವಂತೆ ಮಾಡು ಕೆಲವೇ ದಿನಗಳಲ್ಲಿ ನಿನ್ನ ಅಪೇಕ್ಷೆ ಪೂರೈಸುತ್ತದೆ ಎಂದಳು. 

ತಾಯಿ ಕೊಟ್ಟ ಪುಡಿಯನ್ನು ಮುಚ್ಚಿಟ್ಟುಕೊಂಡು ಗಂಡನ ಮನೆಗೆ ಬಂದಳು. ಅಂದಿನಿಂದಲೇ ಗಂಡನನ್ನು ಚೆನ್ನಾಗಿ ಮಾತನಾಡಿಸಿ ತಾಯಿ ಹೇಳಿದ ಎಲ್ಲವನ್ನು ಚಾಚು ತಪ್ಪದೇ ಮಾಡುತ್ತಿದ್ದಳು ಪ್ರತಿನಿತ್ಯವೂ  ಊಟದಲ್ಲಿ  ಪುಡಿಯನ್ನು ಬೆರೆಸಿ ಕೊಡುತ್ತಿದ್ದಳು. ಮೂರು ತಿಂಗಳು ಕಳೆಯಿತು. ಒಂದು ದಿನ ಮಗಳು ದುಃಖದಿಂದ ಅಳುತ್ತಾ ತಾಯಿ ಮನೆಗೆ  ಓಡೋಡಿ ಬಂದಳು. ಬಿಕ್ಕಳಿಸಿ ಅಳು ತ್ತಿದ್ದಳು. ತಾಯಿ ಸಮಾಧಾನ ಮಾಡಿದರು ಅವಳ ಅಳು ನಿಲ್ಲುಲಿಲ್ಲ. ಅಂತೂ ಸುಧಾರಿಸಿಕೊಂಡು, ಅಮ್ಮಾ ನನ್ನ ಗಂಡ ನನಗೆ ಬೇಕು. ಅವರೀಗ ತುಂಬಾ ಬದಲಾಗಿದ್ದಾರೆ.  ಅವರಷ್ಟು ಒಳ್ಳೆಯವರು ಯಾರು ಇಲ್ಲ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ನಾನು ಕೇಳಿದ್ದೆಲ್ಲ ಕೊಡಿಸುತ್ತಾರೆ. ನನಗಾಗಿ ಸಮಯ ಮಾಡಿಕೊಳ್ಳುತ್ತಾರೆ.  ಯಾರು ಪ್ರೀತಿಸಿದಷ್ಟು ಪ್ರೀತಿಯಿಂದ ನೋಡುತ್ತಾರೆ. ಅಮ್ಮ ನನ್ನ ಗಂಡ ಬೇಕು, ಆಗಲೇ ವಿಷದ ಪುಡಿ ಕೊಡುತ್ತಾ  ಮೂರು ತಿಂಗಳು ಕಳೆಯಿತು. ಏನಾದರೂ ಮಾಡು ಎಂದು  ಕಣ್ಣೀರು ಹಾಕಿದಳು.

ತಾಯಿ ಸಮಾಧಾನದಿಂದ, ಮಗಳೇ ಆತಂಕ ಪಡಬೇಡ, ನಿನ್ನ ಗಂಡನಿಗೆ ಏನು ಆಗುವುದಿಲ್ಲ, ಅಪಾಯವು ಬರುವುದಿಲ್ಲ  ಆತಂಕ ಬೇಡ ಎಂದು ನಗುತ್ತಾ ತಾಯಿ ಹೇಳಿದಾಗ, ಸಂತೋಷ ಹಾಗೂ ಆಶ್ಚರ್ಯ ಒಟ್ಟಿಗೆ ಆಯಿತು. ಮಗಳೇ ಒಟ್ಟಿನಲ್ಲಿ ನಿನ್ನ ತಪ್ಪು ನಿನಗೆ ಅರಿವಾಯಿತಲ್ಲ ಅಷ್ಟು ಸಾಕು. ನಾನು ನಿನಗೆ ಕೊಟ್ಟ ಪುಡಿ ದೇಹಕ್ಕೆ ಶಕ್ತಿ ಬರುವಂಥ, ನಾರು ಬೇರುಗಳನ್ನು ಬಳಸಿ ಕುಟ್ಟಿ ಪುಡಿ ಮಾಡಿ  ನಿಮ್ಮ ತಂದೆಗೆ ರಾತ್ರಿ ಹಾಲಿನ ಬೆರೆಸಿ ಕೊಡಲು ಮಾಡಿದ ಶಕ್ತಿವರ್ಧಕ ಪುಡಿ. ಅದನ್ನೇ ನಿನಗೆ ಕೊಟ್ಟಿದ್ದು ಎಂದಾಗ ಇಬ್ಬರ ಮೊಗದಲ್ಲೂ ನಗು ಮೂಡಿತು.

ಮಗಳು ಹೇಳಿದಳು ಅಮ್ಮ ಆ ದಿನ ನಾನು ಬಂದು ನಿನ್ನಲ್ಲಿ ಎಲ್ಲ  ಹೇಳಿಕೊಂಡಾಗ ನೀನು ಯಾವುದೇ ಬುದ್ಧಿವಾದ ಹೇಳಿದರೂ, ನಾನು ಕೇಳುವ ಪರಿಸ್ಥಿತಿ ಯಲ್ಲಿ ಇರಲಿಲ್ಲ.  ನಾನು ಹೇಳಿದಂತೆ ಕೇಳಿದರೆ, ಸಹಾಯ ಮಾಡುವೆ ಎಂದು ನೀನು ಹೇಳಿ, ಸೂಚನೆಗಳ ಜೊತೆ, ನನ್ನ ಅನುಮಾನ ಬದಲಾಗಲು ಕಾಲಾವಕಾಶ ಕೊಟ್ಟು ನನ್ನ ಮನಸ್ಥಿತಿಯನ್ನು ಬದಲಾಯಿಸಿದ ನಿನಗೆ ಕೋಟಿ ಪ್ರಣಾಮಗಳು ಅಮ್ಮಾ ಎಂದು ತಾಯಿಯನ್ನು ಬಿಗಿದಪ್ಪಿ ಕೊಂಡಳು.

( ಜನಕರಾಜ, ಮಗಳು ಸೀತೆಯನ್ನು ರಾಮನಿಗೆ ಮದುವೆ  ಮಾಡಿಕೊಡುವಾಗ ಆಕೆಯ ಕೈಯನ್ನು ರಾಮನ ಕೈ ಮೇಲೆ ಇಟ್ಟು, ನನ್ನ ಮಗಳು ನಿನಗೆ ನೆರಳಾಗಿ ರುತ್ತಾಳೆ.  ನೀನು ಸಾಧನೆಯಲ್ಲಿ  ಎತ್ತರಕ್ಕೆ   ಅಭಿವೃದ್ಧಿ ಪಥದತ್ತ  ಸಾಗುವಾಗ, ನನ್ನ ಮಗಳು ಹಿಂದೆ ನೆರಳಾಗಿ ಜೊತೆಯಲ್ಲಿ ಇರುತ್ತಾಳೆ. “ಬಿಸಿಲಲ್ಲಿ ನಿಂತಾಗ ನೆರಳು ಹಿಂದೆ ಇರುತ್ತದೆ.”  ವಯಸ್ಸಾದಂತೆ ಉತ್ಸಾಹ ಕಮ್ಮಿಯಾದಾಗ ತಾಯಿಯಂತೆ  ಮುಂದೆ ನಿಂತು ನಿನ್ನನ್ನು ನಡೆಸುತ್ತಾಳೆ “ಸಂಜೆಯಾಗುತ್ತಿದ್ದಂತೆ ಸೂರ್ಯ ಹಿಂದೆ ಹೋಗುತ್ತಾನೆ  ನೆರಳು ಮುಂದೆ ಬರುತ್ತದೆ”.  ಭಾರತೀಯರ

ದಾಂಪತ್ಯದ ಕಲ್ಪನೆ ಹೀಗಿದೆ ಎಂದು ಜನಕ ಮಹಾರಾಜ ತಿಳಿಸಿದ್ದನು.)

ಕುಟುಂಬದಲ್ಲಿ  ತಾಳ್ಮೆ ಎಂಬ ಮಂತ್ರ ಬೇಕು.  ಏನೂ ಮಾಡುವುದಿಲ್ಲ ಎಂದು ಗಂಡ, ನನ್ನನ್ನು ನೋಡಲಿಲ್ಲವೆಂದು ಹೆಂಡತಿ, ಒಬ್ಬರಿಗೊಬ್ಬರ ಮೇಲೆ ಗೂಬೆ ಕೂರಿಸುತ್ತಾ  ಹೋದರೆ ಸಮಸ್ಯೆಗಳು ಬದುಕನ್ನೇ ಕಂಗೆಡಿಸುತ್ತದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ತಪ್ಪಾಗಿರುತ್ತದೆ.  ಕುಳಿತು ಮಾತನಾಡಿ ತಿದ್ದಿಕೊಳ್ಳಬೇಕು.  ಸಾಧ್ಯವಾದಷ್ಟು ತಾಳ್ಮೆ ಇದ್ದರೆ,  ಸಂಸಾರದ  ಸುಖ ತಿಳಿಯುತ್ತದೆ.” ಹೆಣ್ಣು ಅತಿಯಾದ ನಿರೀಕ್ಷೆ ಇಟ್ಟು ಕೊಳ್ಳಬಾರದು. ಗಂಡನಾದವನು ಅಧಿಕಾರ ಚಲಾಯಿಸದೆ, ಪ್ರೀತಿ ತೋರಿಸಬೇಕು.

ಬುದ್ಧಿ ಮಾತು  ಹೇಳಿದರೆ ಕೇಳಬೇಕಮ್ಮ ಮಗಳೇ

ಮನ ಶುದ್ಧಳಾಗಿ  ಗಂಡನೋಡನೆ ಬಾಳ ಬೇಕಮ್ಮ, ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಮಗಳೇ

ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ,

ಕೊಟ್ಟುಕೊಂಬುವ ನೆಂಟರೊಡನೆ ದ್ವೇಷ ಬೇಡಮ್ಮ

ಅಟ್ಟು ಹೋಗುವ ಕಾಲದಲ್ಲಿ ಆಟ ಬೇಡಮ್ಮ.

ಪರರ ನಿಂದಿಪ  ಹೆಂಗಳೂಡನೆ  ಸೇರಬೇಡಮ್ಮ

ಗುರು ಪುರಂದರ ವಿಠಲನ ಸ್ಮರಣೆಯ ಮರೆಯಬೇಡಮ್ಮ.

ವಂದನೆಗಳೊಂದಿಗೆ,

ಬರಹ:-  ರಮ್ಯ ಪುರಾಣ